×
Ad

ಗೋಹತ್ಯೆ ಆರೋಪದಲ್ಲಿ ಎನ್‌ಎಸ್‌ಎ ಅಡಿ ಬಂಧಿತ ಮೂವರ ಬಿಡುಗಡೆ

Update: 2021-08-14 09:54 IST

ಲಕ್ನೋ, ಆ.14: ಮನೆಯಲ್ಲೇ ರಹಸ್ಯವಾಗಿ ಹಸುವನ್ನು ಹತ್ಯೆ ಮಾಡುವುದು ಬಹುಶಃ ಬಡತನ ಅಥವಾ ನಿರುದ್ಯೋಗ ಇಲ್ಲವೇ ಹಸಿವಿನ ಕಾರಣದಿಂದ ಇರಬಹುದು; ಇದು ಬಹುಶಃ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯೇ ವಿನಃ ಸಾರ್ವಜನಿಕ ಶಾಂತಿಗೆ ಭಂಗ ತರುವ ವಿಚಾರವಲ್ಲ ಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ, ಮೂವರು ಸೀತಾಪುರ ನಿವಾಸಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ.

ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಿದ್ದ ಮೂವರ ವಿರುದ್ಧದ ಪ್ರಕರಣಗಳು ಉತ್ತರ ಪ್ರದೇಶ ಗೋಹತ್ಯೆ ಕಾಯ್ದೆ ವ್ಯಾಪ್ತಿಗೆ ಬರುವ ಪ್ರಕರಣವಾಗಿದ್ದು, ಇವರನ್ನು ಬಿಡುಗಡೆ ಮಾಡಿದರೆ ಮತ್ತೆ ಈ ಅಪರಾಧ ಎಸಗುತ್ತಾರೆ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ಎಂದು ಹೇಳಿ, ಆರೋಪಿಗಳ ಬಿಡುಗಡೆಗೆ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರನ್ನೊಳಗೊಂಡ ಪೀಠ, ಪರ್ವೇಝ್, ಇರ್ಫಾನ್ ಮತ್ತು ರಹ್ಮತುಲ್ಲಾ ಪ್ರತ್ಯೇಕವಾಗಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿ ಇವರನ್ನು ಇತರ ಅಪರಾಧ ಪ್ರಕರಣಗಳಿಲ್ಲದಿದ್ದರೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೂಚಿಸಿದೆ.

2020ರ ಜುಲೈ 12ರಂದು ಉತ್ತರ ಪ್ರದೇಶ ಗೋಹತ್ಯೆ ಕಾಯ್ದೆಯ ಅನ್ವಯ ಸೀತಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ 2020ರ ಆಗಸ್ಟ್ 14ರಂದು ಇವರ ವಿರುದ್ಧ ಎನ್‌ಎಸ್‌ಎ ಅಡಿಯೂ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳನ್ನು ಬಂಧನದಲ್ಲಿ ಇಟ್ಟಿರುವ ಕ್ರಮವನ್ನು ಪ್ರಶ್ನಿಸಿದ ಆರೋಪಿಗಳ ಪರ ವಕೀಲ ನರೇಂದ್ರ ಗುಪ್ತಾ, ಈ ಬಂಧನ ನ್ಯಾಯಸಮ್ಮತವಲ್ಲ ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News