ಸೌರ, ಗಾಳಿ ವಿದ್ಯುತ್ ಉತ್ಪಾದನೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತೇ?

Update: 2021-08-14 05:30 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.14: ಜಲವಿದ್ಯುತ್ ಯೋಜನೆಗಳು ಹೊರತುಪಡಿಸಿ ಭಾರತದ ನವೀಕರಿಸಬಹುದಾದ ಮೂಲದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 100 ಗಿಗಾವ್ಯಾಟ್ ತಲುಪಿದ್ದು, ಭಾರತ ಹಸಿರು ಇಂಧನ ಉತ್ಪಾದನಾ ಸಾಮರ್ಥ್ಯದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನ ಗಳಿಸಿದೆ.

ವಿಶ್ವದ ಮೂರನೇ ಅತಿದೊಡ್ಡ ಮಾಲಿನ್ಯಕಾರಕ ದೇಶವಾಗಿರುವ ಭಾರತದಲ್ಲಿ ಈ ಮೈಲುಗಲ್ಲು ತಲುಪಿರುವುದು ಐತಿಹಾಸಿಕ ಸಾಧನೆಯಾಗಿದೆ. 2022ರ ಒಳಗಾಗಿ ಭಾರತ 175 ಗಿಗಾವ್ಯಾಟ್ ಹಸಿರು ಇಂಧನ ಉತ್ಪಾದನಾ ಸಾಮರ್ಥ್ಯ ಹೊಂದಲಿದೆ ಎಂದು ಕೇಂದ್ರ ಸರಕಾರ 2015ರಲ್ಲಿ ಘೋಷಿಸಿತ್ತು.

ಆದರೆ ಈಗ ಅಭಿವೃದ್ಧಿ ಹೊಂದಿದ ವೇಗದಲ್ಲಿ ಸಾಮರ್ಥ್ಯ ವೃದ್ಧಿಸಿಕೊಂಡರೆ, ನಿಗದಿತ ಅವಧಿಯಲ್ಲಿ ಗುರಿ ತಲುಪುವುದು ಅಸಾಧ್ಯವಾಗಿದೆ. ಆದರೆ ಸರಕಾರ ಮಾತ್ರ ಸುಸ್ಥಿರ ಅಭಿವೃದ್ಧಿ ಗುರಿಗೆ ಅನುಗುಣವಾಗಿ 2030ರ ಒಳಗಾಗಿ 450 ಗಿಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆಯ ಗುರಿಹಾಕಿಕೊಂಡಿರುವುದಾಗಿ ಹೇಳಿದೆ.

ಈ ಸಾಧನೆಯು ಭಾರತಕ್ಕೆ ಶೂನ್ಯ ಮಾಲಿನ್ಯ ಗುರಿ ಘೋಷಣೆಯ ಒತ್ತಡದ ವಿರುದ್ಧ ಪ್ರತಿರೋಧಕ್ಕೆ ಅನುವಾಗಲಿದ್ದು, ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸುವಂತೆ ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಒತ್ತಡ ತರಲು ಸಹಕಾರಿಯಾಗಲಿದೆ.

"ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದ ಅಡಿಯಲ್ಲಿ ಭಾರತದ ವಿದ್ಯುತ್ ವಲಯಕ್ಕೆ ಮತ್ತೊಂದು ಐತಿಹಾಸಿಕ ದಿನ... ವಿದ್ಯುತ್ ವರ್ಗಾವಣೆಯಲ್ಲಿ ನಾವು ನಾಗರಿಕ ನಾಯಕತ್ವದ ಸ್ಥಾನವನ್ನು ಮುಂದುವರಿಸಲಿದ್ದೇವೆ" ಎಂದು ವಿದ್ಯುತ್ ಖಾತೆ ಸಚಿವ ರಾಜ್‌ಕುಮಾರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News