ರಾಹುಲ್ ಗಾಂಧಿಯವರ ಟ್ವಿಟರ್ ಖಾತೆ ಮರುಸ್ಥಾಪನೆ

Update: 2021-08-14 05:41 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಒಂದು ವಾರದ ನಂತರ ಟ್ವಿಟರ್ ಸಂಸ್ಥೆಯು ಶನಿವಾರ ರಾಹುಲ್ ಅವರ ಟ್ವಿಟರ್ ಹ್ಯಾಂಡಲ್ ಅನ್ನು ಮರುಸ್ಥಾಪಿಸಿತು.

ವಾಯುವ್ಯ ದಿಲ್ಲಿಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ಒಂಬತ್ತು ವರ್ಷದ ಬಾಲಕಿಯ ಸಂತ್ರಸ್ತ ಕುಟುಂಬದ ಚಿತ್ರಗಳನ್ನು ಟ್ವೀಟ್ ಮಾಡಿದ ನಂತರ ರಾಹುಲ್ ಗಾಂಧಿಯವರ ಟ್ವಿಟರ್  ಖಾತೆಯನ್ನು ಕಳೆದ ವಾರ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿತ್ತು.

ರಾಹುಲ್ ಗಾಂಧಿ ಅವರು ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಟ್ವಿಟರ್ ಹೇಳಿತ್ತು.

ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡ ಕೆಲವು ಪಕ್ಷದ ನಾಯಕರ ಟ್ವಿಟರ್ ಖಾತೆಗಳನ್ನು ಸಹ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನು ಅನ್‌ಲಾಕ್ ಮಾಡಲಾಗಿದೆ" ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು. ಕೆಲವು ನಾಯಕರ ಖಾತೆಗಳನ್ನು ಕೂಡ ಮರುಸ್ಥಾಪಿಸಲಾಗಿದೆ.

ಟ್ವಿಟರ್ "ರಾಷ್ಟ್ರೀಯ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ" ಎಂದು ಶುಕ್ರವಾರ ಆರೋಪಿಸಿದ್ದ ರಾಹುಲ್ ಗಾಂಧಿ, ತನ್ನ  ಟ್ವಿಟರ್ ಹ್ಯಾಂಡಲ್ ಅನ್ನು ಮುಚ್ಚುವುದು "ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ" ಎಂದು ಹೇಳಿದ್ದರು.

"ಟ್ವಿಟರ್‌ನ ಅಪಾಯಕಾರಿ ಆಟ" ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್ ವೀಡಿಯೊ ಹೇಳಿಕೆಯಲ್ಲಿ ಗಾಂಧಿ, ಟ್ವಿಟರ್  ವಾಸ್ತವವಾಗಿ ಒಂದು ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದು ಪಕ್ಷಪಾತದ ವೇದಿಕೆಯಾಗಿದೆ. ಇದು ಆ ದಿನದ ಸರಕಾರ ಹೇಳುವುದನ್ನು ಕೇಳುತ್ತದೆ. ಕಂಪನಿಯು ತನ್ನ ಲಕ್ಷಾಂತರ ಅನುಯಾಯಿಗಳ ಅಭಿಪ್ರಾಯದ ಹಕ್ಕನ್ನು ನಿರಾಕರಿಸುತ್ತಿದೆ. ಇದು ಅನ್ಯಾಯವಾಗಿದೆ''ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News