ಎಂಎಲ್ ಸಿ ನೇಮಕಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ವಿಳಂಬ ನೀತಿ: ತಕ್ಷಣವೇ ಇತ್ಯರ್ಥಕ್ಕೆ ಹೈಕೋರ್ಟ್ ಆದೇಶ
ಮುಂಬೈ: ಶಾಸಕಾಂಗ ಮಂಡಳಿಯ ಸ್ಥಾನಗಳನ್ನು ಅನಿರ್ದಿಷ್ಟವಾಗಿ ಖಾಲಿಯಾಗಿ ಇಡಲಾಗುವುದಿಲ್ಲ ಎಂದಿರುವ ಬಾಂಬೆ ಹೈಕೋರ್ಟ್, ಸದಸ್ಯರನ್ನು ನಾಮನಿರ್ದೇಶನ ಮಾಡುವ ವಿಷಯದ ಬಗ್ಗೆ ಚರ್ಚಿಸಲು ಮಹಾರಾಷ್ಟ್ರ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ನ್ಯಾಯಾಲಯವು ಸೂಚಿಸಿದೆ. ವಿಷಯದ ಕುರಿತು ನಿರ್ಧರಿಸಲು ಎಂಟು ತಿಂಗಳು ವಿಳಂಬವು ಸಮಂಜಸವಾದ ಸಮಯವನ್ನು ಮೀರಿದೆ ಎಂದು ಹೇಳಿದೆ.
12 ಸದಸ್ಯರನ್ನು ಶಾಸಕಾಂಗ ಮಂಡಳಿಗೆ ನಾಮನಿರ್ದೇಶನ ಮಾಡುವ ವಿಚಾರದಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿರುವ ಕುರಿತು ಮಹಾರಾಷ್ಟ್ರ ಸರಕಾರ ನ್ಯಾಯಾಲಯದ ಮೊರೆ ಹೋಗಿತ್ತು.
ಮಹಾರಾಷ್ಟ್ರ ಸಂಪುಟ ಕಳುಹಿಸಿದ ಪ್ರಸ್ತಾವನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿಳಂಬ ಮಾಡಿದ್ದು ಇದು ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಮಹಾ ವಿಕಾಸ ಅಘಾಡಿ (ಎಂವಿಎ) ಹಾಗೂ ರಾಜ್ಯಪಾಲರ ನಡುವಿನ ಪ್ರಮುಖ ವಿವಾದವಾಗಿ ಪರಿಣಮಿಸಿತ್ತು.
"ಈ ನ್ಯಾಯಾಲಯವು ರಾಜ್ಯಪಾಲರಿಗೆ ಆದೇಶಗಳನ್ನು ನೀಡಲು ಸಾಧ್ಯವಿಲ್ಲ. ಆದರೆ ರಾಜ್ಯಪಾಲರು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆಶಿಸುತ್ತದೆ. ಯಾವುದಾದರೂ ಹೆಸರಿನೊಂದಿಗೆ ಸಮಸ್ಯೆ ಇದ್ದರೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಈ ವಿಷಯವನ್ನು ಚರ್ಚಿಸಬೇಕು" ಎಂದು " ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಶಿಫಾರಸನ್ನು ಅಂಗೀಕರಿಸುವ ಅಥವಾ ಹಿಂತಿರುಗಿಸುವ ಬಾಧ್ಯತೆ ರಾಜ್ಯಪಾಲರಿಗಿದೆ ಎಂದಿರುವ ಹೈಕೋರ್ಟ್, ರಾಜ್ಯ ಮಂತ್ರಿಗಳ ಮಂಡಳಿಯನ್ನು ಸಮಂಜಸವಾದ ಸಮಯದಲ್ಲಿ ಬಿಡುಗಡೆ ಮಾಡಬೇಕು. ರಾಜ್ಯ ಮಂಡಳಿಯಲ್ಲಿನ ಸ್ಥಾನಗಳನ್ನು ಅನಿರ್ದಿಷ್ಟವಾಗಿ ಖಾಲಿ ಇಡುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಹಾಗೂ ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ರಾಜ್ಯಪಾಲರು ತಮ್ಮ ನಿರ್ಧಾರವನ್ನು ಮುಂಚಿತವಾಗಿ ತಿಳಿಸದಿರಲು ನಿಜವಾದ ಕಾರಣಗಳನ್ನು ಹೊಂದಿದ್ದರೂ ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕೆಂದು ನ್ಯಾಯಾಲಯ ಹೇಳಿದೆ.
"ಕಾರಣ ಏನೇ ಇರಲಿ ಬಿಕ್ಕಟ್ಟು ಬಗೆಹರಿಯುವ ಸಮಯ ಬಂದಿದೆ ... ಎಂಟು ತಿಂಗಳುಗಳು ಸಮಂಜಸವಾದ ಸಮಯವನ್ನು ಮೀರಿದೆ ಎಂದು ತೋರುತ್ತದೆ" ಎಂದು ಪೀಠ ಹೇಳಿತು.
ಬಾಂಬೆ ಹೈಕೋರ್ಟ್ ತೀರ್ಪು ನೀಡಿದ ಕೆಲವು ಗಂಟೆಗಳ ನಂತರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಶುಕ್ರವಾರ ಸಂಜೆ ನಡೆದಿರುವ ಈ ಭೇಟಿ ಸೌಜನ್ಯ ಭೇಟಿಯಾಗಿತ್ತು ಎಂದು ರಾಜಭವನ ಹೇಳಿದೆ.