×
Ad

​ಆ.17ರಂದು ‘ಜನಾಶೀರ್ವಾದ ಯಾತ್ರೆ’ ದ.ಕ. ಜಿಲ್ಲೆ ಪ್ರವೇಶ

Update: 2021-08-14 17:48 IST

ಮಂಗಳೂರು, ಆ.14: ಬಿಜೆಪಿ ರಾಷ್ಟ್ರೀಯ ಸಮಿತಿ ಸೂಚನೆಯಂತೆ ಕೇಂದ್ರದಲ್ಲಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ದೇಶದ ವಿವಿಧ ರಾಜ್ಯ, ಜಿಲ್ಲೆಗಳನ್ನು ಸುತ್ತಾಡಿ ಜನಾಶೀರ್ವಾದವನ್ನು ಪಡೆಯಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿರುವ ‘ಜನಾಶೀರ್ವಾದ ಯಾತ್ರೆ’ಯು ಆ.17ರಂದು ದ.ಕ.ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ನೇತೃತ್ವದ ತಂಡ ದ.ಕ.ಜಿಲ್ಲೆಯನ್ನು ಪ್ರವೇಶಿಸಲಿದೆ. ಈ ಯಾತ್ರೆಯು ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ ಜಿಲ್ಲಾಡಳಿತದ ಸೂಚನೆಯಂತೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕಿರುವುದರಿಂತ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆ.17ರ ಸಂಜೆ 6 ಗಂಗೆ ಹೆಜಮಾಡಿಯಲ್ಲಿ ಜನಾಶೀರ್ವಾದ ಯಾತ್ರೆಯನ್ನು ಜಿಲ್ಲಾ ಬಿಜೆಪಿ ಸ್ವಾಗತಿಸಲಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್, ರಾಜ್ಯದ ಪದಾಧಿಕಾರಿಗಳು, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತಿತರರು ಈ ತಂಡದಲ್ಲಿರುತ್ತಾರೆ ಎಂದರು.

ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು ಮತ್ತು ಕೋವಿಡ್ ಜಾಗೃತಿಯ ಕಾರ್ಯವು ಈ ಜನಾಶೀರ್ವಾದ ಯಾತ್ರೆಯ ಮೂಲಕ ಆಗುತ್ತಿದೆ. ಸಚಿವ ರಾಜೀವ್ ಚಂದ್ರಶೇಖರ್ ಆ.17ರ ಸಂಜೆ ಜಿಲ್ಲೆಯ ಪ್ರತಿಷ್ಠಿತ ಉದ್ಯಮಿಗಳನ್ನು, ಶಿಕ್ಷಣ ತಜ್ಞರನ್ನು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆ.18ರಂದು ಬೆಳಗ್ಗೆ ಶ್ರೀ ಕ್ಷೇತ್ರ ಕದ್ರಿಗೆ ತೆರಳುವರು. 9:30ಕ್ಕೆ ಜಿಲ್ಲೆಯ ವಿವಿಧ ಸಮುದಾಯದ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ 11:30ರ ವೇಳೆಗೆ ಕೊಡಗಿಗೆ ತೆರಳಲಿದ್ದಾರೆ ಎಂದು ಸುದರ್ಶನ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ರಾಮ್‌ದಾಸ್ ಬಂಟ್ವಾಳ, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News