ಸುಳ್ಯ: ತಾಯಿ, ಮಗಳು ಒಟ್ಟಿಗೆ ಎಸೆಸೆಲ್ಸಿ ಪಾಸ್

Update: 2021-08-14 13:30 GMT

ಸುಳ್ಯ: ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಪಾಸಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಸಾಕ್ಷಿಯಾಗಿದೆ.

ಸುಳ್ಯ ಜಯನಗರದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಪಾಸಾದ ತಾಯಿ ಮತ್ತು ಮಗಳು. ಸುಳ್ಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗೀಯಾಗಿ ಪರೀಕ್ಷೆ ಬರೆದು 42ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ.

ಮಗಳು ತೃಷಾ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 10ನೇ ತರಗತಿಯಲ್ಲಿ ಓದಿ ಪರೀಕ್ಷೆ ಬರೆದು ಪಾಸಾದರು. ಮಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ ತಾಯಿ ಗೀತಾ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. 25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ‌ ಮೊಟಕುಗೊಂಡಿತ್ತು. ಅಂದಿನಿಂದಲೇ ಎಸೆಸೆಲ್ಸಿ ಪಾಸಾಗಬೇಕು ಎಂದು ಹಂಬಲ ಮನಸಿನಲ್ಲಿತ್ತು. ಮೂರು ವರ್ಷದ ಹಿಂದೆ ಒಮ್ಮೆ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರೂ ಉತ್ತೀರ್ಣರಾಗಿರಲಿಲ್ಲ.‌ ಛಲ ಬಿಡದೆ ಈ ಬಾರಿ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಮಗಳ ಪುಸ್ತಕವನ್ನು ಓದಿಯೇ ತಾಯಿಯೂ ಪಾಸ್ ಆಗಿದ್ದಾರೆ, ಮಗಳೇ ತಾಯಿಗೆ ಗುರುವಾಗಿದ್ದಾಳೆ ಎಂಬುದು ಇನ್ನೊಂದು ವಿಶೇಷತೆ.

ಮಗಳು ತರಗತಿಯಲ್ಲಿ ಕಲಿತ ಪಾಠಗಳನ್ನು ಮನೆಯಲ್ಲಿ ತಾಯಿಗೆ ಹೇಳಿ ಕೊಡುತ್ತಿದ್ದಳು. ಮಗಳ ಪಾಠ ಕೇಳಿ ಕಲಿತ ಗೀತಾ ವೃತ್ತಿ ಜೀವನ, ಕುಟುಂಬ ನಿರ್ವಹಣೆಯ ಮಧ್ಯೆ ಸಮಯ ಸಿಕ್ಕಿದಾಗಲೆಲ್ಲ ಓದಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಖಾಸಗಿಯಾಗಿ ಪರೀಕ್ಷೆಗೆ ಹಾಜರಾಗಿ ಪುತ್ತೂರಿನಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಪತಿ ಮತ್ತು ಮನೆಯವರು ಕೂಡ ಗೀತಾರ ಪ್ರಯತ್ನಕ್ಕೆ ಬೆಂಬಲ ನೀಡಿದ್ದರು.  ಎಸೆಸೆಲ್ಸಿ ಪರೀಕ್ಷೆ ಉತ್ತೀರ್ಣರಾಗಿರುವುದಕ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಮತ್ತು ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಗೀತಾ ಅವರನ್ನು ಅಭಿನಂದಿಸಿದ್ದಾರೆ. ಮುಂದೆ ಮಗಳು ತ್ರಿಷಾ ಪಿಯುಸಿಗೆ ಸೇರಿ ಶಿಕ್ಷಣ ಮುಂದುವರಿಸಿದರೆ ಗೀತಾ ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ಶಿಕ್ಷಣ ಮುಂದುರಿಸುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಕೊರೋನ ಸಂಕಷ್ಟದ ನಡುವೆ ನಡೆದ ಎಸೆಸೆಲ್ಸಿ ಪರೀಕ್ಷೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News