×
Ad

ಉಡುಪಿ: ಯೋಗಪಟು ತನುಶ್ರೀ ಪಿತ್ರೋಡಿಯಿಂದ ಏಳನೇ ವಿಶ್ವದಾಖಲೆ

Update: 2021-08-15 21:05 IST

ಉಡುಪಿ, ಆ.15: ಈಗಾಗಲೇ ಆರು ವಿಶ್ವದಾಖಲೆ ಮಾಡಿರುವ ಯೋಗರತ್ನ ತನುಶ್ರೀ ಪಿತ್ರೋಡಿ(13) ಇದೀಗ ಮತ್ತೊಂದು ಸಾಧನೆ ಮೂಲಕ ಏಳನೇ ವಿಶ್ವ ದಾಖಲೆಯನ್ನು ಮಾಡಿದ್ದಾರೆ. 43 ನಿಮಿಷ 18 ಸೆಕೆಂಡ್‌ನಲ್ಲಿ 245 ಯೋಗಾಸನ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

75ನೇ ಸ್ವಾತಂತ್ರೋತ್ಸವದ ಅಂಗವಾಗಿ ರವಿವಾರ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತನುಶ್ರೀ ಯೋಗಾಸನದ ಕ್ಲಿಷ್ಟಕರ ಭಂಗಿಗಳನ್ನು ಪ್ರದರ್ಶಿಸಿದರು. ಇದರೊಂದಿಗೆ ಅವರು ಈ ಹಿಂದೆ ಬೇರೆಯವರ ಹೆಸರಿನಲ್ಲಿದ್ದ 1 ಗಂಟೆಯಲ್ಲಿ 145 ಆಸನಗಳ ಪ್ರದರ್ಶನದ ದಾಖಲೆಯನ್ನು ಮುರಿದ್ದಾರೆ.

ಗೋಲ್ಡನ್ ಬುಕ್ ಆಫ್ ವಲ್ಡರ್ ರೆಕಾಡ್ಸರ್ ಏಷ್ಯದ ಮುಖ್ಯಸ್ಥ ಮನೀಶ್ ಮಾತನಾಡಿ, ಈವರೆಗೆ ನೋಡಿದ ಎರಡು ಸಾವಿರ ದಾಖಲೆಗಳಲ್ಲಿ ತನುಶ್ರೀ ಈ ದಾಖಲೆ ಅದ್ಭುತವಾಗಿದೆ. ಅತ್ಯಂತ ಕ್ಲಿಷ್ಟಕರ ಭಂಗಿಗಳನ್ನು ಆಕೆ ಸಮಯಕ್ಕೂ ಮೊದಲು ಪೂರ್ಣಗೊಳಿಸಿದ್ದಾರೆ. ಈ ದಾಖಲೆ ಮುಂದೆ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಇದು ನೂರು ದಾಖಲೆಗೆ ಸಮವಾಗಿದೆ ಎಂದರು.

ತನುಶ್ರೀ ಪಿತ್ರೋಡಿ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ 180ಕ್ಕೂ ಅಧಿಕ ಆಸನಗಳನ್ನು ಕಲಿತಿದ್ದೆ. 245 ಆಸನಗಳನ್ನು ಸತತ ಪರಿಶ್ರಮದ ಮೂಲಕ ನಿಗದಿತ ಸಮಯದ ಮಿತಿಯೊಳಗೆ ಮಾಡಲು ಸಾಧ್ಯವಾಗಿದೆ. 7ನೇ ವಿಶ್ವದಾಖಲೆಯಲ್ಲಿ ಹೆಸರು ದಾಖಲಾಗಿರುವುದು ಸಂತಸ ತಂದಿದೆ ಎಂದರು.

ಉದ್ಯಾವರ ಪಿತ್ರೋಡಿ ಉದಯ್ ಕುಮಾರ್ ಮತ್ತು ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ ಉಡುಪಿಯ ಸೇಂಟ್ ಸಿಸಿಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ 8ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಶುಭಾಹಾರೈಸಿದರು. ಇದೇ ಸಂದರ್ಭದಲ್ಲಿ ಭಾರತೀಯ ಯೋಧರನ್ನು ಗೌರವಿಸಲಾಯಿತು.

ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸದಸ್ಯೆ ರಶ್ಮೀ ಚಿತ್ರರಂಜನ್ ಭಟ್, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪರೀಕ ಎಸ್‌ಡಿಎಂನ ಡಾ.ಶೋಭಿತ್ ಶೆಟ್ಟಿ, ಬಡಗುಬೆಟ್ಟು ಕ್ರೆಡಿಟ್ ಸೊಸೈಟಿ ಆಡಳಿತ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ, ದಿವಾಕರ್ ಸನೀಲ್, ಯೋಗ ಗುರು ರಾಮಕೃಷ್ಣ ಕೊಡಂಚ, ನರೇಂದ್ರ ಕಾಮತ್ ಕಾರ್ಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News