ಉಡುಪಿ ಮಲ್ಲಿಗೆಗೆ ಜಿ.ಐ. ಮಾನ್ಯತೆ; ಜಿಲ್ಲೆಯ ಮಲ್ಲಿಗೆ ಬೆಳೆಗಾರರು ಅರ್ಜಿ ಸಲ್ಲಿಸಿ: ಜಿಲ್ಲಾ ಕೃಷಿಕ ಸಂಘ
ಉಡುಪಿ, ಆ.16: ತನ್ನ ವಿಶಿಷ್ಟ ಸುವಾಸನೆಯಿಂದಾಗಿ ಎಲ್ಲೆಡೆ ಶುಭ ಸಮಾರಂಭ, ಧಾರ್ಮಿಕ ಸಮಾರಂಭಗಳಲ್ಲಿ ಬಹಳ ಬೇಡಿಕೆಯಲ್ಲಿರುವ ಉಡುಪಿ ಮಲ್ಲಿಗೆಗೆ ಇದೀಗ ಜಿಯಾಗ್ರಫಿಕಲ್ ಇಂಡಿಕೇಶನ್ (ಜಿ.ಐ. ಮಾರ್ಕ್ -ಭೌಗೋಳಿ ಗುರುತು) ಮಾನ್ಯತೆ ದೊರೆತಿದೆ.
ಇದರಿಂದಾಗಿ ಮಲ್ಲಿಗೆ ಹೂವು ಮತ್ತು ಅದನ್ನು ಬೆಳೆಸುವ ಕೃಷಿಕರಿಗೆ ಕಾನೂನಿನ ರಕ್ಷಣೆ ಸಿಗಲಿದೆ. ಹೂವಿನ ಮಾರುಕಟ್ಟೆಯಲ್ಲಿ ಬೇರೆ ಪ್ರದೇಶಗಳ ಮಲ್ಲಿಗೆಯನ್ನು ತಂದು ಉಡುಪಿ ಮಲ್ಲಿಗೆ ಎಂದು ಗ್ರಾಹಕರನ್ನು ಯಾಮಾರಿಸಿ ಅಧಿಕ ಬೆಲೆಗೆ ಮಾರಿ ಮೋಸಗೊಳಿಸುವ ವ್ಯಾಪಾರಿಗಳಿದ್ದಾರೆ. ಇಂತಹವರ ವಿರುದ್ಧ ಹೋರಾಟ ನಡೆಸಲು ಮಲ್ಲಿಗೆ ಕೃಷಿಕರಿಗೆ ಬಲ ಬರಬೇಕಾದರೆ ಪ್ರತಿ ಯೊಬ್ಬ ಮಲ್ಲಿಗೆ ಬೆಳೆಗಾರರೂ ಜಿ.ಐ. ಮಾನ್ಯತಾ ಪತ್ರ ಪಡೆದುಕೊಳ್ಳಬೇಕು ಎಂದು ಪೃಥ್ವಿ ಧಾಮ ಕಾಂಪ್ಲೆಕ್ಸ್‌ನಲ್ಲಿ ಇಂದು ಈ ಕುರಿತು ನಡೆದ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಪ್ರಸ್ತುತ ಉಡುಪಿ ಮಲ್ಲಿಗೆ ಬೆಳೆಸುವ ಜಿಲ್ಲೆಯ ಕೃಷಿಕರೆಲ್ಲರೂ ತಾವು ಉಡುಪಿ ಮಲ್ಲಿಗೆ ಬೆಳೆಗಾರ ಎಂದು ಅಧಿಕೃತವಾಗಿ ನೋಂದಾಯಿಸಿ ಕೊಳ್ಳಲು ಉಡುಪಿ ಜಿಲ್ಲಾ ಕೃಷಿಕ ಸಂಘವು ಬಂಟಕಲ್ಲು ಶ್ರೀಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಟಿಂಗ್ ಸೆಂಟರ್ ಮೂಲಕ ವ್ಯವಸ್ಥೆ ಮಾಡಿದೆ.
ಹೆಸರು ನೋಂದಾಯಿಸಿಕೊಳ್ಳುವ ಮಲ್ಲಿಗೆ ಕೃಷಿಕರು ತಮ್ಮ ಆಧಾರ್ ಕಾರ್ಡ್ ಪ್ರತಿ, ಮಲ್ಲಿಗೆ ಬೆಳೆಸುತ್ತಿರುವ ಜಮೀನಿನ ಪಹಣಿ ಪತ್ರಿಕೆ (ಆರ್‌ಟಿಸಿ) ಪ್ರತಿ ಮತ್ತು ನೋಂದಣಿ ಶುಲ್ಕ ರೂ.10ನ್ನು ಪಾವತಿಸಬೇಕಿದೆ. ನೋಂದಾಯಿತ ಗೊಳ್ಳುವ ಎಲ್ಲಾ ಮಲ್ಲಿಗೆ ಕೃಷಿಕರಿಗೆ ಚೆನ್ನೈನಲ್ಲಿರುವ ಜಿ.ಐ.ಅಥಾರಿಟಿಯು ಮಾನ್ಯತಾ ಪತ್ರ ನೀಡಲಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೃಷಿಕ ಸಂಘದ ಸ್ಥಳೀಯ ಕಾರ್ಯಕರ್ತರನ್ನು ಅಥವಾ ದೂರವಾಣಿ ಸಂಖ್ಯೆ: 9686866940/9448107705/9844295967ನ್ನು ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಸೋದೆ ವಾದಿರಾಜ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ರತ್ನ ಕುಮಾರ್, ಮಣಿಪಾಲ ಎಂಐಎಂನ ಪ್ರೊ.ಡಾ. ಹರೀಶ್ ಜೋಶಿ, ಬಂಟಕಲ್ಲು ಶ್ರೀಮಧ್ವವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ ಮೆಂಟ್‌ನ ಉಪ ಪ್ರಾಂಶುಪಾಲ ಡಾ. ಗಣೇಶ್ ಐತಾಳ್, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಭಾಗವಹಿಸಿದ್ದರು.