×
Ad

​ಮೆಸ್ಕಾಂ ನೇಮಕಾತಿ; ಬುಧವಾರ ಬೆಂಗಳೂರಲ್ಲಿ ಸಭೆ: ಸಚಿವ ವಿ.ಸುನೀಲ್ ಕುಮಾರ್

Update: 2021-08-16 21:47 IST

ಕೋಟ, ಆ.16: ಮೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಒಂದು ವರ್ಷದ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಾತಿ ಆದೇಶ ಪಡೆದವರು ಯಾವುದೇ ಆತಂಕ, ಭಯಕ್ಕೊಳಗಾಗಬೇಕಿಲ್ಲ. ಬುಧವಾರ ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಸಿ ಸರಕಾರ ಒಂದು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಜ್ಯ ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಇಂದು ಕೋಟದ ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ನೇಮಕಾತಿ ಪ್ರಕ್ರಿಯೆಗಳೆಲ್ಲಾ ಒಂದು ವರ್ಷದ ಹಿಂದೆ ಮುಗಿದು ನೇಮಕಾತಿ ಆದೇಶ ಪಡೆದವರಿಗೆ ಇನ್ನೂ ಕೆಲಸಕ್ಕೆ ಸೇರುವ ಆದೇಶ ಬಂದಿಲ್ಲ. ಅವರ್ಯಾರೂ ಆತಂಕ ಪಡಬೇಕಿಲ್ಲ. ಚೌಕಟ್ಟಿನಡಿ ಯಾವ ನ್ಯಾಯ ದೊರಕಿಸಲು ಸಾಧ್ಯವೋ ಅದನ್ನು ಸರಕಾರ ಮಾಡಲಿದೆ. ಇಲಾಖೆ ಖಿಂಡಿತ ಅವರ ಜೊತೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಸರಕಾರ ನಿರ್ವಹಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಈ ಸಮಸ್ಯೆ ಇಂದಿನದಲ್ಲ. ಈ ಕಾರ್ಖಾನೆ ಯನ್ನು ಸರಕಾರವೇ ನಡೆಸಬೇಕೊ ಅಥವಾ ಖಾಸಗಿಯವರಿಗೆ ನೀಡಬೇಕೊ ಎಂಬ ಚರ್ಚೆ ನಡೆಯುತ್ತಿದೆ. ಸರಕಾರ ಈ ಹಂತದಲ್ಲಿ ಯಾವುದೇ ನಿರ್ಣಯ ತೆಗೆದು ಕೊಂಡಿಲ್ಲ.

ಈಗಿನ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರ ತಕ್ಷಣ ಕಾರ್ಖಾನೆಯ ನಿರ್ವಹಣೆ ವಹಿಸಿಕೊಳ್ಳುವುದು ಕಷ್ಟ. ಏನು ಮಾಡಬಹುದು ಎಂಬ ಬಗ್ಗೆ ಮುಂದೆ ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ ಶಾಸಕರ ಸಭೆಯೊಂದನ್ನು ಶೀಘ್ರವೇ ಕರೆದು, ಇದರಲ್ಲಿ ಮುಂದಿನ ಎರಡು ಹಾಗೂ ಹತ್ತು ವರ್ಷಗಳಿಗೆ ಜಿಲ್ಲೆಗೆ ಏನೇನೆಲ್ಲಾ ಕೆಲಸಗಳಾಗಬೇಕೆಂಬುದನ್ನು ಚರ್ಚಿಸಿ ಒಂದು ನಿರ್ಣಯ ಕೈಗೊಳ್ಳಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News