ದಲಿತರ ಭೂಮಿಯ ವಾಣಿಜ್ಯ ಪರಿವರ್ತನೆ; ಕಾನೂನು ತಿದ್ದುಪಡಿ ತರಲು ಸಚಿವ ಕೋಟಗೆ ದಸಂಸ ಮನವಿ

Update: 2021-08-16 16:23 GMT

ಉಡುಪಿ, ಆ.16: ದಲಿತರ ಭೂಮಿಯನ್ನು ವಾಣಿಜ್ಯ ಪರಿವರ್ತನೆಗೆ ಇರುವ ನಿಬಂಧನೆಗಳನ್ನು ರದ್ದುಗೊಳಿಸಿ, ಕಾನೂನಿನಲ್ಲಿ ತಿದ್ದುಪಡಿ ತರು ವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಶನಿವಾರ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿತು.

ಈಗ ಇರುವ ಕಾನೂನಿನ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ ಭೂಮಿಯನ್ನು ಕೇವಲ ಮನೆ ನಿರ್ಮಿಸುವ ಕಾರಣಕ್ಕಾಗಿ ಕೇವಲ 10 ಸೆಂಟ್ಸ್ ಮಾತ್ರ ಪರಿವರ್ತನೆ ಮಾಡಲು ಅವಕಾಶವಿದೆ. ಇದರಿಂದ ದಲಿತರು ತಮ್ಮ ಭೂಮಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಮಾಡಲು, ವಾಣಿಜ್ಯ ಕಟ್ಟಡ ಕಟ್ಟಲು ಅವಕಾಶ ಇರುವುದಿಲ್ಲ. ಈ ನಿಬಂಧನೆಯನ್ನು ರದ್ದು ಮಾಡಿದರೆ ದಲಿತರು ಕೂಡ ತಮ್ಮ ಭೂಮಿಯಲ್ಲಿ ವಾಣಿಜ್ಯ ವ್ಯವಹಾರವನ್ನು ಮಾಡಿ ಕೊಂಡು ಸ್ವಂತ ಉದ್ಯೋಗ ರೂಪಿಸಿಕೊಳ್ಳಲು ಅವಕಾಶವಾಗುತ್ತದೆ ಎಂದು ದಸಂಸ ನಿಯೋಗ ಸಚಿವರಿಗೆ ಮನದಟ್ಟು ಮಾಡಿತು.

ಸಮಾಜ ಕಲ್ಯಾಣ ಇಲಾಖೆಯಿಂದ ಮೀಸಲಿಟ್ಟಿರುವ ಎಸ್‌ಸಿಪಿ/ ಟಿಎಸ್‌ಪಿ ಅನುದಾನ ಸುಮಾರು 25000 ಕೋಟಿ ರೂ. ಹಣವನ್ನು ದಲಿತರ ಮೂಲ ಭೂತ ಸ್ವಯಂ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ, ವಸತಿ ಮತ್ತು ಸ್ವ ಉದ್ಯೋಗ ಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕೆಂದು ನಿಯೋಗ ಸಚಿವರನ್ನು ಒತ್ತಾಯಿಸಿತು.

ಮನವಿಯನ್ನು ಕಾಳಜಿ ಮತ್ತು ಮುತುವರ್ಜಿಯಿಂದ ಕಾರ್ಯರೂಪಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು. ಬೆಂಗಳೂರಿನಲ್ಲಿ ಇಡೀ ರಾಜ್ಯದ ದಲಿತ ನಾಯಕರ ಸಭೆ ಕರೆದು ತಮ್ಮ ಬೇಡಿಕೆ ಮತ್ತು ಅವಶ್ಯಕತೆಗಳ ಬಗ್ಗೆ ಅಭಿಪ್ರಾಯ ಕ್ರೋಢೀಕರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ ತೆಕ್ಕಟ್ಟೆ, ಮಂಜುನಾಥ್ ಬಾಳ್ಕುದ್ರು, ಶ್ರೀಧರ ಕುಂಜಿಬೆಟ್ಟು, ಪದಾಧಿಕಾರಿಗಳಾದ ಶಿವಾನಂದ ಮೂಡುಬೆಟ್ಟು, ಎಸ್.ನಾರಾಯಣ, ವಡ್ಡರ್ಸೆ ಶ್ರೀನಿವಾಸ, ಶಿವಾನಂದ ಬಿರ್ತಿ, ಆನಿಲ ಬಿರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News