×
Ad

ಸಕಾರಾತ್ಮಕ ಚಿಂತನೆಯಿಂದ ಸರಕಾರಿ ಶಾಲೆಗಳ ಉಳಿವು ಸಾಧ್ಯ: ಶಾಸಕ ಯು.ಟಿ.ಖಾದರ್

Update: 2021-08-16 22:38 IST

ಬಂಟ್ವಾಳ, ಆ.16: ಊರಿನ ಸಂಘ ಸಂಸ್ಥೆಗಳು, ಶಾಲಾ ಅಭಿವೃದ್ಧಿ ಸಮಿತಿ, ದಾನಿಗಳು, ಪೋಷಕರು, ಸ್ಥಳೀಯ ಜನ ಪ್ರತಿನಿಧಿಗಳು ಸಕಾರಾತ್ಮಕವಾಗಿ ಚಿಂತಿಸಿ ಪ್ರಯತ್ನಪಟ್ಟರೆ ಮುಚ್ಚುವ ಹಂತಕ್ಕೆ ತಲುಪಿದ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಪೈಪೋಟಿ ನೀಡುವ ಹಂತಕ್ಕೆ ಮಾರ್ಪಾಟು ಮಾಡಬಹುದು ಎಂಬುದಕ್ಕೆ ಪುದು ಮಾಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ ಎಂದು ಯು.ಟಿ.ಖಾದರ್ ಹೇಳಿದರು. 

ಪುದು ಮಾಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ತರಗತಿ ಕೊಠಡಿ ಹಾಗೂ ಸಭಾ ಭವನವನ್ನು ಸೋಮವಾರ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಕೇವಲ 28 ವಿದ್ಯಾರ್ಥಿಗಳು ಇದ್ದ ಪುದು ಮಾಪ್ಲ ಸರಕಾರಿ ಶಾಲೆ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿತ್ತು. ಈ ಊರಿನ ಸಂಘ ಸಂಸ್ಥೆಗಳು, ದಾನಿಗಳು, ಜನರು, ಎಸ್.ಡಿ.ಎಂ.ಸಿ. ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಇಂದು ಈ ಶಾಲೆಯಲ್ಲಿ 520 ವಿದ್ಯಾರ್ಥಿಗಳು ಇರುವಂತೆ ಮಾರ್ಪಾಡು ಮಾಡಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಯು.ಟಿ.ಖಾದರ್ ಹೇಳಿದರು. 

ಪುದು ಮಾಪ್ಲ ಶಾಲೆಯ ಮಾದರಿ ಬದಲಾವಣೆ ಬಗ್ಗೆ ರಾಜ್ಯ ಶಿಕ್ಷಣ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅವರು ಒಪ್ಪಿಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಾ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದ ಪುದು ಮಾಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಟುಡೇ ಫೌಂಡೇಶನ್ ಹಾಗೂ ಈ ಊರಿನ ಎಲ್ಲರ ಸಹಕಾರದೊಂದಿಗೆ ರಾಜ್ಯಕ್ಕೆ ಮಾದರಿಯಾಗುವಂತೆ ಪರಿವರ್ತನೆ ಮಾಡಲಾಗಿದೆ. ಇಂದು ಈ ಶಾಲೆಯಲ್ಲಿ 520 ವಿದ್ಯಾರ್ಥಿಗಳು ಕಲಿಯುತ್ತಿದ್ದು ಇನ್ನಷ್ಟು ವಿದ್ಯಾರ್ಥಿಗಳು ಶಾಲೆಗೆ ಸೇರಲು ಬಯಸುತ್ತಿರುವುದು ಖುಷಿಯ ವಿಷಯ ಎಂದು ಹೇಳಿದರು. 

ಈಗಾಗಲೇ ಶಾಲೆಗೆ ಬೇಕಾದ ಹೊಸ ತರಗತಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಶಾಸಕ ಯು.ಟಿ.ಖಾದರ್ ಅವರಿಗೆ ಅಭಿನಂದನೆ. ಹೆಚ್ಚುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗೆ ಇನ್ನಷ್ಟು ಸೌಕರ್ಯಗಳ ಅಗತ್ಯವಿದ್ದು ಈ ಬಗ್ಗೆ ಶಾಸಕರ ಬಳಿ ಚರ್ಚಿಸಿದಾಗ ಅದನ್ನೂ ಒದಗಿಸಿಕೊಂಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ ಎಂದರು.  

ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ, ಸಿಆರ್‌ಪಿ ರೋಹಿಣಿ, ಉದ್ಯಮಿಗಳಾದ ಇಸಾಕ್, ಯೂಸೂಫ್ ಅಲಂಕಾರು, ಅಕ್ರಂ ಬಶೀರ್, ಮನಪಾ ಸದಸ್ಯ ಅಬ್ದುಲ್ ಲತೀಫ್, ಅಬೂಬಕ್ಕರ್ ಫರಂಗಿಪೇಟೆ, ಮಜೀದ್ ಫರಂಗಿಪೇಟೆ, ರಫೀಕ್ ಪೇರಿಮಾರ್, ಇಮ್ತಿಯಾಝ್ ತುಂಬೆ, ಮುಹಮ್ಮದ್ ಮೋನು, ಸಲಾಂ ಮಲ್ಲಿ, ಇಶಾಂ ಫರಂಗಿಪೇಟೆ, ಇಕ್ಬಾಲ್ ಸುಜೀರ್, ಝಾಹಿರ್ ಕುಂಪನಮಜಲು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ., ಮೌಲನಾ ಆಝಾದ್ ಶಾಲೆಯ ಮುಖ್ಯಶಿಕ್ಷಕ ಉಮರಬ್ಬ, ತಾ.ಪಂ. ಮಾಜಿ ಅಧ್ಯಕ್ಷ ಆಸಿಫ್ ಇಕ್ಬಾಲ್, ಗ್ರಾ.ಪಂ. ಸದಸ್ಯರಾದ ಭಾಸ್ಕರ್ ರೈ, ಕಿಶೋರ್ ಸುಜೀರ್, ಲವೀನಾ, ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ರವಿ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಶಾಲಾ ತರಗತಿ ಕೊಠಡಿ ಹಾಗೂ ಸಭಾಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ ಶಾಸಕ ಯು.ಟಿ.ಖಾದರ್ ಹಾಗೂ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. 

ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಎಸ್. ಉಳ್ಳಾಲ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಸುನಿತಾ ಲವಿನಾ ಡೆಸಾ ಧನ್ಯವಾದಗೈದರು. ಶಾಲೆಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News