×
Ad

ಮಂಗಳೂರು: ಅತಿಕ್ರಮಣಗೊಂಡ ಆಸ್ತಿ ವಕ್ಫ್ ಇಲಾಖೆಗೆ ಹಸ್ತಾಂತರ

Update: 2021-08-16 22:50 IST

ಮಂಗಳೂರು, ಆ.16: ತಾಲೂಕಿನ ಕಸ್ಬ ಬಝಾರ್ ಗ್ರಾಮದ ಗೂಡ್‌ಶೆಡ್ ರಸ್ತೆಯಲ್ಲಿನ ಮೂರು ಸೆಂಟ್ಸ್ ಜಮೀನು ಹಾಗೂ ಕಟ್ಟಡ ಅತಿಕ್ರಮಣಕ್ಕೊಳಪಟ್ಟಿತ್ತು. ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದು, ಅತಿಕ್ರಮಣ ತೆರವುಗೊಳಿಸಿ ಆಸ್ತಿಯನ್ನು ವಕ್ಫ್ ಇಲಾಖೆಗೆ ಸೋಮವಾರ ಹಸ್ತಾಂತರಗೊಳಿಸಲಾಯಿತು.

ಆಪಾದಿತರಾದ ಮುಹಮ್ಮದ್ ಕೌಸರ್ ಹಾಗೂ ನಾರ್ತ್ ಚಿತ್ತಾರಿ ಖಿಲ್ರ್ ಜಮಾಅತ್ ಕಮಿಟಿಯು ಬಂದರ್‌ನ ನೀರೇಶ್ವಲ್ಯದ ‘ನಿಝಾಮುದ್ದೀನ್ ಸಾಹೇಬ್’ ಎಂಬ ವಕ್ಫ್ ಸಂಸ್ಥೆಗೆ ಸೇರಿದ್ದ ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದರು. ಮಂಗಳೂರು ಸಿವಿಲ್ ನ್ಯಾಯಾಲಯದಲ್ಲಿ 207/2017ರ ಪ್ರಕರಣದ ತೀರ್ಪು ವಕ್ಫ್ ಪರ ಬಂದಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಆದೇಶದಂತೆ ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಪೊಲೀಸರ ಬೆಂಬಾವಲಿನಲ್ಲಿ ಅಕ್ರಮ ಆಸ್ತಿ ತೆರವುಗೊಳಿಸಲಾಯಿತು. ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು ಅಧಿಕಾರಿಗಳು ವಕ್ಫ್ ಇಲಾಖೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕರ್ ಉಪಸ್ಥಿತರಿದ್ದರು.

ವಕ್ಫ್ ಆಸ್ತಿಯನ್ನು ಅತಿಕ್ರಮಣಗೊಳಿಸಿದವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಅತಿಕ್ರಮಣಕ್ಕೆ ಒಳಪಟ್ಟ ವಕ್ಫ್ ಆಸ್ತಿಯನ್ನು ಮರಳಿ ಪಡೆಯಲು ಆಯಾ ವಕ್ಫ್ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲಾ ವಕ್ಫ್ ಕಚೇರಿ ಹಾಗೂ ಕಂದಾಯ ಇಲಾಖೆಯ ಸೂಕ್ತ ಕ್ರಮದಿಂದಾಗಿ ಆಕ್ರಮಿತ ವಕ್ಫ್ ಆಸ್ತಿಗಳ ಕಾರ್ಯಪಡೆಯು ಈ ದಿಸೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News