ತಾರಿಗುಡ್ಡೆ: ಕುಟುಂಬಕ್ಕೆ ಮನೆ ಹಸ್ತಾಂತ
Update: 2021-08-16 23:23 IST
ಮಂಗಳೂರು, ಆ.16: ನೀರುಮಾರ್ಗ ಗ್ರಾಪಂ ವ್ಯಾಪ್ತಿಯ ತಾರಿಗುಡ್ಡೆಯಲ್ಲಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬವೊಂದಕ್ಕೆ ಬಿಲ್ಲವ ಸಮಾಜದ ಮುಖಂಡ ಮೋಹನದಾಸ ಬಂಗೇರ ಉಚಿತವಾಗಿ ನಿರ್ಮಿಸಿದ ಮನೆಯನ್ನು ರವಿವಾರ ಹಸ್ತಾಂತರಿಸಲಾಯಿತು.
ಹಲವು ವರ್ಷದಿಂದ ಸರಕಾರಿ ಸೈಟಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ನಾಗೇಶ್ ಪೂಜಾರಿ, ಪತ್ನಿ ಸರಸ್ವತಿ, ಪುತ್ರ ಭರತ್ ರಾಜ್‌ರಿಗೆ ವಾಮಂಜೂರು ಬಿಲ್ಲವ ಸೇವಾ ಸಮಾಜದ ಮಾಜಿ ಅಧ್ಯಕ್ಷರೂ ಆಗಿರುವ ಮೋಹನದಾಸ ಬಂಗೇರರು ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಅದರಂತೆ 3.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಸ್ವಾತಂತ್ರೋತ್ಸವದ ನೆನಪಿನಲ್ಲಿ ಮನೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಐಒಬಿ ನೌಕರ ಜನಾರ್ದನ ಸುವರ್ಣ ವಾಮಂಜೂರು, ತುಕಾರಾಮ ಮಂಗಳನಗರ, ಶಿವಾಜಿ ಬಂಗೇರ ಅಮ್ಮುಂಜೆ, ಮೇಸ್ತ್ರಿ ಸುರೇಶ್ ಶೆಟ್ಟಿ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.