ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಆರೋಪ: ನ್ಯಾಯಾಂಗ ಬಂಧನದಲ್ಲಿದ್ದ ಮೂವರಿಗೆ ಜಾಮೀನು
ಪುತ್ತೂರು : ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಕಬಕ ಗ್ರಾಮ ಪಂಚಾಯತ್ ವತಿಯಿಂದ ನಡೆಸಲಾಗಿದ್ದ ಸ್ವರಾಜ್ಯ ರಥ ಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವುದನ್ನು ಆಕ್ಷೇಪಿಸಿ ರಥ ಯಾತ್ರೆ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪಂಚಾಯತ್ ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿತ್ತು. ದೂರಿನಂತೆ ಪೊಲೀಸರು 7 ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಕಬಕ ನಿವಾಸಿಗಳಾದ ಅಝೀಝ್, ಶಮೀರ್ ಮತ್ತು ಕುಡಿಪ್ಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರನ್ನು ಬಂಧಿಸಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಇದೀಗ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ಪರವಾಗಿ ವಕೀಲರಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್, ಅಬ್ದುಲ್ ರಹಿಮಾನ್, ಮುಸ್ತಫಾ ವಾದಿಸಿದ್ದರು.