×
Ad

ಮಂಗಳೂರು; ಬಾಲಕಿ ಅತ್ಯಾಚಾರ ಪ್ರಕರಣ: 10 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2021-08-17 18:21 IST
ಮನೋಜ್ ಬಿ. ಶೆಟ್ಟಿ

ಮಂಗಳೂರು, ಆ.17: ಬಾಲಕಿಯನ್ನು ಪುಸಲಾಯಿಸಿ ಆಟೊರಿಕ್ಷಾದಲ್ಲಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಬಜ್ಪೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ-ಮೇಲಂತಬೆಟ್ಟು ನಿವಾಸಿ ಮನೋಜ್ ಬಿ. ಶೆಟ್ಟಿ ಬಂಧಿತ ಆರೋಪಿ.

ಪ್ರಕರಣ ವಿವರ: 2011ರ ಜೂನ್ 24ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರು ನೀರುಡೆಯ 7ನೇ ತರಗತಿಯ ವಿದ್ಯಾರ್ಥಿನಿ ನಗರದ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಮನೋಜ್ ಶೆಟ್ಟಿ ಮತ್ತು ಆತನ ಸ್ನೇಹಿತ ದಿನೇಶ್ ಅಮೀನ್ ಎಂಬವರು ಬಾಲಕಿಯನ್ನು ಪುಸಲಾಯಿಸಿ ಆಟೋ ರಿಕ್ಷಾದಲ್ಲಿ ಮನೆಗೆ ಕರೆದೊಯ್ದಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಆರೋಪಿಗಳು ಬಾಲಕಿಯ ಅತ್ಯಾಚಾರಗೈದಿದ್ದಾರೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಈ ಹಿಂದಿನ ಎಸಿಪಿ ಪುಟ್ಟ ಮಾದಯ್ಯ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿ ಮನೋಜ್ ಬಿ. ಶೆಟ್ಟಿ ವಿಚಾರಣೆಯ ಸಮಯ ನ್ಯಾಯಾಲಯದ ಎದುರು ಹಾಜರಾಗದೆ ತಲೆಮರೆಸಿಕೊಂಡಿದ್ದ. ಇತ್ತ, ವಿಚಾರಣೆ ನಡೆಸಿದ ನ್ಯಾಯಾಲಯವು 2ನೇ ಆರೋಪಿ ದಿನೇಶ್ ಅಮೀನ್ ಎಂಬಾತನಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಆರೋಪಿ ಮನೋಜ್ ಬಿ. ಶೆಟ್ಟಿ ಎಂಬಾತನು ವಿಚಾರಣೆಗೆ ಹಾಜರಾಗದೆ ಇರುವುದರಿಂದ ಆತನ ವಿರುದ್ಧ ‘ಎಲ್‌ಪಿಸಿ’ ವಾರೆಂಟ್ ಹೊರಡಿಸಲಾಗಿತ್ತು. ಆರೋಪಿ ಮನೋಜ್ ಶೆಟ್ಟಿ ಸುಮಾರು 10 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಮತ್ತು ಮೇಲಂತಬೆಟ್ಟು ಎಂಬಲ್ಲಿ ತನ್ನ ಹೆಸರು ಮೋಹನ್ ಎಂಬುದಾಗಿ ಬದಲಾಯಿಸಿಕೊಂಡು ವಾಸಿಸುತ್ತಿದ್ದ. ಆರೋಪಿಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಆರೋಪಿಯನ್ನು ಬಂಧಿಸಿದ್ದಾರೆ.

ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡವು ಕಳೆದ ಎರಡು ತಿಂಗಳಲ್ಲಿ ಐದಕ್ಕೂ ಹೆಚ್ಚು ಹಳೆಯ ಪ್ರಕರಣಗಳನ್ನು ಪತ್ತೆ ಮಾಡಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಪಿಎಸ್‌ಐ ಪೂವಪ್ಪ ಹಾಗೂ ಅಪರಾಧ ಪತ್ತೆ ವಿಭಾಗದ ಎಎಸ್‌ಐ ರಾಮ ಪೂಜಾರಿ, ಸಿಬ್ಬಂದಿ ರಶೀದ್ ಶೇಖ್, ಸಿದ್ದಲಿಂಗಯ್ಯ ಹಿರೇಮಠ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News