×
Ad

ದೇಶಕ್ಕೆ ಒಬ್ಬರೇ ಮಹಾತ್ಮ ಗಾಂಧೀಜಿ: ಹರೀಶ್ ಕುಮಾರ್‌

Update: 2021-08-17 18:37 IST

ಮಂಗಳೂರು : ಈ ದೇಶಕ್ಕೆ ಒಬ್ಬರೇ ಮಹಾತ್ಮ ಅವರು ಮಹಾತ್ಮ ಗಾಂಧೀಜಿ. ಬೇರೆ ಯಾರನ್ನೂ ರಾಷ್ಟ್ರಪಿತ ಅಥವಾ ಬಾಪೂಜಿ ಎಂಬುದಾಗಿ ಗೌರವಿಸುವುದಿಲ್ಲ. ಅವರಿಗೆ ಮಾತ್ರ ದೇಶದಲ್ಲಿ ಶ್ರೇಷ್ಠವಾದ ಸ್ಥಾನಮಾನವನ್ನು ನೀಡಲಾಗಿದೆ. ಹಾಗಾಗಿ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತದ ವತಿಯಿಂದ ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರು ಸಿದ್ಧಪಡಿಸಿಪಡಿಸಿದ ಭಾಷಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೊನೆಯಲ್ಲಿ ಉಲ್ಲೇಖಿಸಿದ್ದಾರೆಂದು ಆಕ್ಷೇಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪುರಭವನದ ಎದುರಿನ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸ್ವಾತಂತ್ರಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಟ ಮಾಡಿದ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಮಹಾತ್ಮಗಾಂಧಿಯನ್ನು ಅವಹೇಳನ ಮಾಡುವ ಕೆಲಸ ದ.ಕ. ಜಿಲ್ಲೆಯಲ್ಲಿ ಆಗಿರುವುದು ನೋವಿನ ವಿಚಾರ. ಇದು ಗಾಂಧೀಜಿಗೆ ಮಾತ್ರವಲ್ಲದೆ, ದೇಶಪ್ರೇಮಿಗಳು ಹಾಗೂ ಸ್ವಾತಂತ್ರ ಹೋರಾಟಗಾರರಿಗೆ ಮಾಡಿದ ಅವಮಾನ. ಸರಕಾರ ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು. ಗಾಂಧಿ ಪ್ರತಿಮೆ ಆವರಣವನ್ನು ಡಂಪಿಂಗ್ ಯಾರ್ಡ್ ಮಾಡಲಾಗಿದೆ. ಇದು ಯಾವ ರೀತಿಯ ಸ್ವಚ್ಛ ಭಾರತ್. ದೇಶದ ಮಹಾತ್ಮನ ಪ್ರತಿಮೆಯ ಸುತ್ತ ಕಸವನ್ನು ರಾಶಿ ಹಾಕಿ ಸ್ಥಳೀಯ ಆಡಳಿತ ಅಭಿವೃದ್ದಿ ಹೆಸರಿನಲ್ಲಿ ಅವಮಾನ ಮಾಡಿದೆ. ನಾವು ಅದನ್ನು ಶುಚಿಗೊಳಿಸಿದ್ದೇವೆ ಎಂದು ಹರೀಶ್ ಕುಮಾರ್ ಹೇಳಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಮಾತನಾಡಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಮುಖಂಡರಾದ ಸದಾಶಿವ ಉಳ್ಳಾಲ್, ಸಾಹುಲ್ ಹಮೀದ್, ವಿಶ್ವಾಸ್ ದಾಸ್, ಲುಕ್ಮಾನ್ ಬಂಟ್ವಾಳ, ಸೌಆದ್ ಸುಳ್ಯ, ಸಂತೋಷ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಸದಾಶಿವ ಶೆಟ್ಟಿ, ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ, ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವ, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಶ್ರಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ಪ್ರತಿಭಾ ಕುಳಾಯಿ, ಅಪ್ಪಿ, ರಜನೀಶ್ ಕಾಪಿಕಾಡ್, ನೀರಜ್ ಪಾಲ್, ಹೊನ್ನಯ್ಯ, ಭರತೇಶ್ ಅಮೀನ್, ಸಿಎಂ ಮುಸ್ತಫಾ, ದುರ್ಗಾ ಪ್ರಸಾದ್, ಹರಿನಾಥ್, ಮಲ್ಲಿಕಾರ್ಜುನ, ನಮಿತಾ ರಾವ್, ಶಾಂತಲ ಗಟ್ಟಿ, ದೀಪಕ್ ಪಿಲಾರ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ನಝೀರ್ ಬಜಾಲ್, ರಮಾನಂದ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ಶಬೀರ್, ವಿವೇಕ್‌ರಾಜ್, ಭಾಸ್ಕರ ರಾವ್, ಗಿರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗಾಂಧಿ ಪ್ರತಿಮೆ ಸುತ್ತ ಕಾಮಗಾರಿ ಸಾಮಗ್ರಿ ರಾಶಿ!

ಪುರಭವನದ ಎದುರಿನ, ಮಂಗಳೂರು ಮಹಾನಗರ ಪಾಲಿಕೆ ಆಡಳಿತಕ್ಕೊಳಪಡುವ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆ ಸುತ್ತಮುತ್ತ ಸ್ಮಾರ್ಟ್ ಸಿಟಿ ಕಾಮಗಾರಿಯ ಸಾಮಗ್ರಿಗಳು ರಾಶಿ ಬಿದ್ದಿದ್ದು, ಸ್ವಾತಂತ್ರೋತ್ಸವ ದಿನಾಚರಣೆಯಂದು ಕೂಡಾ ಅದನ್ನು ತೆರವುಗೊಳಿಸಿ ಶುಚಿಗೊಳಿಸುವ ಗೋಜಿಗೆ ಪಾಲಿಕೆ ಆಡಳಿತ ಮುಂದಾಗಿಲ್ಲ!ಮಿನಿ ವಿಧಾನ ಸೌಧದ ಎದುರಿನಿಂದ ತಾಜ್‌ಮಹಲ್ ಹೊಟೇಲ್‌ವರೆಗೆ ಅಂಡರ್ ಪಾಸ್ (ಕೆಳಸೇತುವೆ) ಕಳೆದ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದು, ಆ ಸೇತುವೆ ಈ ಪಾರ್ಕ್ ಮೂಲಕವೇ ಹಾದು ಹೋಗುತ್ತಿದೆ. ಹಾಗಾಗಿ ಈ ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ಬಂದ್ ಮಾಡಲಾಗಿದ್ದು, ಇಲ್ಲಿ ಕಾಮಗಾರಿಯ ಸಾಮಗ್ರಿಗಳನ್ನು ರಾಶಿ ಹಾಕಲಾಗುತ್ತಿದ್ದು, ಶೀಟುಗಳನ್ನು ಅಳವಡಿಸಿ ಮುಚ್ಚಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಬಳಸಲಾದ ಪಿವಿಸಿ ಪೈಪ್ ತುಂಡುಗಳು, ಕಲ್ಲಿನ ರಾಶಿಯ ನಡುವೆ ಇಂದು ಗಾಂಧಿ ಪ್ರತಿಮೆ ಅನಾಥ ರೀತಿಯಲ್ಲಿರುವುದು ಇಂದು ಕಂಡು ಬಂತು.ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಈ ಪ್ರತಿಮೆಯೆದುರು ಪ್ರತಿಭಟನೆಯ ಸಂದರ್ಭ ಪ್ರತಿಮೆ ಸುತ್ತಮುತ್ತ ಇದ್ದ ಪೈಪು ಹಾಗೂ ಕಲ್ಲಿನ ರಾಶಿಯನ್ನು ತೆರವುಗೊಳಿಸಿ ಗಾಂಧಿ ಪ್ರತಿಮೆಗೆ ನೀರೆರೆದು ಹೂಮಾಲೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News