×
Ad

ಸಮುದ್ರಕ್ಕೆ ಬಿದ್ದು ಯುವ ಯಕ್ಷ ಕಲಾವಿದ ಗೋಪಾಲ ಗೌಡ ಮೃತ್ಯು

Update: 2021-08-17 19:31 IST

ಉಡುಪಿ, ಆ.17: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯುವ ಯಕ್ಷಗಾನ ಕಲಾವಿದ ಕಂದವಳ್ಳಿ ಗೋಪಾಲ ಗೌಡ (32) ಆ.14ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದು, ಮಂಗಳವಾರ  ಅವರ ಮೃತದೇಹ ಕುಮಟಾ ಹೆಡ್ ಬಂದರ್ ಬೀಚ್ ಬಳಿ ಪತ್ತೆಯಾಗಿದೆ.

ಗೋಪಾಲ ಗೌಡ ಅವರು ಕಂದವಳ್ಳಿ ಕಲ್ಲಡ್ಡೆಯ ಮಾದೇವ ಗೌಡ ಎಂಬವರ ಪುತ್ರನಾಗಿದ್ದು, ಮಂಜನಾಥ ಎಂಬವರ ಬೋಟಿನಲ್ಲಿ ಮೀನುಗಾರಿಕೆಗಾಗಿ ತೆರಳಿದ್ದಾಗ ಆ.14ರ ರಾತ್ರಿ 7.30ರ ಸಮಾರಿಗೆ ಆಕಸ್ಮಿಕವಾಗಿ ಬೋಟಿನಿಂದ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು, ನಾಪತ್ತೆಯಾಗಿದ್ದರು. ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿತ್ತು. 

ಯಕ್ಷಗಾನ ಕ್ಷೇತ್ರದ ಪ್ರತಿಭಾನ್ವಿತ ಯುವ ಕಲಾವಿದನ ಈ ದುರಂತ ಸಾವಿನಿಂದ ಇಡೀ ಯಕ್ಷಗಾನ ಕ್ಷೇತ್ರವೇ ತಲ್ಲಣಗೊಂಡಿದೆ. ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನರ ಪ್ರೇರಣೆಯಿಂದ ಯಕ್ಷಗಾನವನ್ನು ಕಲಿತ ಗೋಪಾಲ ಗೌಡ, ಸಿಗಂದೂರು, ಮಡಾಮಕ್ಕಿ, ಮೇಗರವಳ್ಳಿ, ಹಟ್ಟಿಯಂಗಡಿ ಪ್ರಕೃತ ಬೊಳ್ಳಂಬಳ್ಳಿ ಮೇಳದಲ್ಲಿ ಒಟ್ಟು 13 ವರ್ಷ ಸೇವೆಗೈದಿದ್ದರು.

ಅಭಿಮನ್ಯು, ಬಬ್ರುವಾಹನ ಮುಂತಾದ ವೇಷಗಳ ಜೊತೆಗೆ ಹೊಸ ಪ್ರಸಂಗದ ಶಿಷ್ಟ ವೇಷಗಳನ್ನು ಕೂಡ ಸೊಗಸಾಗಿ ನಿರ್ವಹಿಸುತ್ತಿದ್ದರು. ಇವರು ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಗೋಪಾಲಗೌಡರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News