ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆ: ಒಂದು ವರ್ಷದಲ್ಲಿ ಶೇ.66ರಿಂದ ಶೇ.24ಕ್ಕೆ ಕುಸಿತ ಕಂಡ ಪ್ರಧಾನಿ ಮೋದಿಯ ಬೆಂಬಲ

Update: 2021-08-17 14:04 GMT

ಹೊಸದಿಲ್ಲಿ,ಆ.17: ಮುಂದಿನ ಪ್ರಧಾನಿ ಹುದ್ದೆಗೆ ಮೊದಲ ಆಯ್ಕೆಯಾಗಿ ಮೋದಿಯವರಿಗೆ ಕಳೆದ ವರ್ಷದವರೆಗೂ ಇದ್ದ ಶೇ.66ರಷ್ಟು ಬೆಂಬಲ ಈಗ ಶೇ.24ಕ್ಕೆ ಕುಸಿದಿದೆ ಎಂದು ಇಂಡಿಯಾ ಟುಡೇ ಮ್ಯಾಗಝಿನ್ ನಡೆಸಿರುವ ‘ಮೂಡ್ ಆಫ್ ದಿ ನೇಷನ್(ದೇಶದ ಮನಃಸ್ಥಿತಿ)’ ಸಮೀಕ್ಷೆಯು ಬಹಿರಂಗಗೊಳಿಸಿದೆ.

ಇದಕ್ಕೆ ಪ್ರಮುಖ ಕಾರಣ ಕೋವಿಡ್ ಎರಡನೇ ಅಲೆ,ಕೇಂದ್ರವು ಅದನ್ನು ನಿರ್ವಹಿಸಿದ್ದ ರೀತಿ ಮತ್ತು ಅದರಿಂದಾಗಿ ಉದ್ಭವಿಸಿದ ಸಂಬಂಧಿತ ಮತ್ತು ಗಂಭೀರ ಆರ್ಥಿಕ ಕಳವಳಗಳಾಗಿವೆ.
 
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ಹುದ್ದೆಗೆ ಎರಡನೇ ಅತ್ಯಂತ ಜನಪ್ರಿಯ ಆಯ್ಕೆಯಾಗಿದ್ದು,ಶೇ.11ರಷ್ಟು ಜನರು ಅವರನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಶೇ.10ರಷ್ಟು ಜನರ ಮೊದಲ ಆಯ್ಕೆಯಾಗಿದ್ದಾರೆ. ಆದಿತ್ಯನಾಥ ಮತ್ತು ರಾಹುಲ್ ಅವರ ಜನಪ್ರಿಯತೆಯಲ್ಲಿ ಏರಿಕೆಯಾಗಿದ್ದು,ಕಳೆದ ವರ್ಷ ಇದು ಅನುಕ್ರಮವಾಗಿ ಶೇ.3 ಮತ್ತು ಶೇ.8 ಆಗಿತ್ತು. ಆದರೆ ತಮ್ಮ ರಾಜ್ಯಗಳ ಜನರ ವೌಲ್ಯಮಾಪನದ ಆಧಾರದಲ್ಲಿ ಮುಖ್ಯಮಂತ್ರಿಗಳ ಶ್ರೇಯಾಂಕಗಳ ಪಟ್ಟಿಯಲ್ಲಿ ಆದಿತ್ಯನಾಥ ಏಳನೇ ಸ್ಥಾನದಲ್ಲಿದ್ದಾರೆ. 

ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶೇ.42ರಷ್ಟು ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಒಡಿಶಾದ ನವೀನ ಪಟ್ನಾಯಕ್, ಕೇರಳದ ಪಿಣರಾಯಿ ವಿಜಯನ್,ಮಹಾರಾಷ್ಟ್ರದ ಉದ್ಧವ ಠಾಕ್ರೆ,ಪ.ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ಅಸ್ಸಾಮಿನ ಹಿಮಂತ ಬಿಸ್ವ ಶರ್ಮಾ ಅವರು ಪಟ್ಟಿಯಲ್ಲಿ ಆದಿತ್ಯನಾಥಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಮೊದಲ ಹತ್ತರಲ್ಲಿ ಬಿಜೆಪಿಯ ಕೇವಲ ಇಬ್ಬರು ಮುಖ್ಯಮಂತ್ರಿಗಳು ಸ್ಥಾನ ಪಡೆದಿದ್ದಾರೆ. ಉತ್ತರ ಪ್ರದೇಶದ ಕೇವಲ ಶೇ.29ರಷ್ಟು ಜನರು ಆದಿತ್ಯನಾಥರ ಅರ್ಹತೆಗೆ ಮಣೆ ಹಾಕಿರುವುದು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿಗೆ ಶುಭಶಕುನವೆಂಬಂತೆ ಕಂಡುಬರುತ್ತಿಲ್ಲ.

ಇಂಡಿಯಾ ಟುಡೇ ಮ್ಯಾಗಝಿನ್ನಲ್ಲಿ ಪ್ರಕಟವಾಗಿರುವ ಸಮೀಕ್ಷೆಯ ಅಂಶಗಳು ಅದು ನಡೆಸುತ್ತಿರುವ ಸುದ್ದಿ ವಾಹಿನಿಯಲ್ಲಿ ಪ್ರೈಮ್ ಟೈಂ ಚರ್ಚೆಯ ಪ್ರಮುಖ ವಿಷಯಗಳಾಗಿದ್ದವು. ಈ ನಡುವೆ ಹಲವಾರು ನೆಟ್ಟಿಗರು ಸಮೀಕ್ಷಾ ವರದಿಯ ಬಗ್ಗೆ ಟ್ವೀಟಿಸಿದ್ದಾರೆ.
 
ಪ್ರಸಕ್ತ ಕಾಲಘಟ್ಟದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಭಾರತೀಯರ ಪ್ರಮುಖ ಕಳವಳಗಳಾಗಿವೆ ಎನ್ನುವುದನ್ನು ಮ್ಯಾಗಝಿನ್ ಕವರ್ ಪೇಜ್ ಬೆಟ್ಟು ಮಾಡಿದೆ. ಆರ್ಥಿಕತೆ ಹದಗೆಡಲಿದೆ ಎಂದು ಭಾವಿಸಿರುವ ಜನರ ಸಂಖ್ಯೆ 2021ರ ಜನವರಿಯಲ್ಲಿ ಶೇ.17ರಷ್ಟಿದ್ದುದು ಕೇವಲ ಆರು ತಿಂಗಳುಗಳಲ್ಲಿ ಶೇ.32ಕ್ಕೆ ಏರಿಕೆಯಾಗಿದೆ.
 
ಸಮೀಕ್ಷೆಯಲ್ಲಿ ಕಂಡು ಬಂದಿರುವ ಧೋರಣೆಗಳ ಬಗ್ಗೆ ಟ್ವೀಟಿಸಿರುವ ಪತ್ರಕರ್ತ ಶಿವಂ ವಿಜ್ ಅವರು, ಮೋದಿಯವರ ಉತ್ತರಾಧಿಕಾರಿಯಾಗಿ ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿಯ ಸಂಭಾವ್ಯ ಆಯ್ಕೆಗೆ ಸಂಬಂಧಿಸಿದಂತೆ ಆದಿತ್ಯನಾಥ ಅವರು ಹಾಲಿ ಗೃಹಸಚಿವ ಅಮಿತ್ ಶಾ ಅವರಿಗೆ ತುಂಬ ಹತ್ತಿರದಲ್ಲಿದ್ದಾರೆ ಎಂದು ಬೆಟ್ಟು ಮಾಡಿದ್ದಾರೆ.
 
ಕೇವಲ ಶೇ.28ರಷ್ಟು ಜನರು ಮೋದಿ ಪ್ರಧಾನಿಯಾದ ಬಳಿಕ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಭಾವಿಸಿದ್ದಾರೆ ಎಂದು ವಿಜ್ ವಿಶ್ಲೇಷಿಸಿದ್ದಾರೆ.
 
ಸರಕಾರವು ಹಣದುಬ್ಬರ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಹೇಳುವವರ ಸಂಖ್ಯೆ 2021 ಜನವರಿಯಲ್ಲಿ ಶೇ.35ರಷ್ಟು ಇದ್ದುದು ಈಗ ಶೇ.60ಕ್ಕೆ ಏರುವುದರೊಂದಿಗೆ ಪ್ರಾಮಾಣಿಕ ಉದ್ದೇಶವನ್ನು ಹೊಂದಿದ್ದಾರೆ ಎಂಬ ಮೋದಿಯವರ ತಥಾಕಥಿತ ಟ್ರೇಡ್ಮಾರ್ಕ್ ಕುಸಿದಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಶಗಳು ತೋರಿಸುತ್ತಿವೆ ಎನ್ನುವುದನ್ನು ವಿಜ್ ಪ್ರಮುಖವಾಗಿ ಬಿಂಬಿಸಿದ್ದಾರೆ.

ಸರಕಾರದ ಪ್ರಯತ್ನಗಳ ಬಗ್ಗೆ ಮಾತ್ರವಲ್ಲ,ಅದು ಮುಂದಿರಿಸಿರುವ ಅಂಕಿಅಂಶಗಳ ಬಗ್ಗೆಯೂ ಶಂಕೆಗಳು ವ್ಯಕ್ತವಾಗಿವೆ. ಅಧಿಕೃತ ಅಂಕಿಅಂಶಗಳಿಗಿಂತ ಹೆಚ್ಚಿನ ಜನರು ಕೋವಿಡ್ ಪೀಡಿತರಾಗಿದ್ದಾರೆ ಎಂದು ಶೇ.71ರಷ್ಟು ಜನರು ಹೇಳಿದ್ದಾರೆ.
 
ಭಾರತದಲ್ಲಿ ಎರಡನೇ ಅಲೆ ಹರಡಲು ಬೃಹತ್ ಸಮಾವೇಶಗಳು ಕಾರಣವಾಗಿದ್ದವು ಎಂದು ಶೇ.27ರಷ್ಟು ಜನರು ಪ್ರತಿಕ್ರಿಯಿಸಿದ್ದರೆ,ಶೇ.10ರಷ್ಟು ಜನರು ಇದಕ್ಕೆ ರಾಜ್ಯ ಸರಕಾರಗಳನ್ನು ದೂರಿದ್ದಾರೆ. ಶೇ.13ರಷ್ಟು ಜನರು ಕೇಂದ್ರವನ್ನು ಮಾತ್ರ ಹೊಣೆಯಾಗಿಸಿದ್ದರೆ ಶೇ.44ರಷ್ಟು ಜನರು ಕೇಂದ್ರ ಮತ್ತು ರಾಜ್ಯ ಸರಕಾರ ಎರಡನ್ನೂ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News