×
Ad

ಜಾತಿಯ ಹೆಸರಿನಲ್ಲಿ ದಲಿತರ ಧಮನ: ಪ್ರೊ.ಫಣಿರಾಜ್

Update: 2021-08-17 20:09 IST

ಉಡುಪಿ, ಆ.17: ದಲಿತರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಡುಗಡೆ ಗೊಂಡ ಆರೋಪಿಗಳನ್ನು ವಿಜಯಯಾತ್ರೆಯಲ್ಲಿ ಕರೆದೊಯ್ಯುವ ಮನ ಸ್ಥಿತಿ ಈ ದೇಶದಲ್ಲಿ ಇದೆ. ಈ ಜಾತಿಯ ಮನೋಸ್ಥಿತಿಗಾಗಿ ನಾವು ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ದಲಿತರನ್ನು ಜಾತಿಯ ಹೆಸರಿನಲ್ಲಿ ಧಮನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಪ್ರಾಪ್ತ ದಲಿತ ಹೆಣ್ಣು ಮಗಳ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಸಹಬಾಳ್ವೆ ಸಂಘಟನೆಯ ನೇತೃತ್ವದಲ್ಲಿ ಆ.17ರಂದು ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನ್ಯಾಶನಲ್ ಕ್ರೈಮ್ ಬ್ಯೂರೋ ವರದಿ ಪ್ರಕಾರ ಭಾರತದಲ್ಲಿ ಪ್ರತಿ ನಿಮಿಷಕ್ಕೆ 10 ಮಂದಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿದೆ. ಅದರಲ್ಲಿ 7 ಮಂದಿ ದಲಿತರು ಹಾಗೂ ಶೂದ್ರರು ಇರುತ್ತಾರೆ. ಈಗಲೂ ಭಾರತ ಶೇ.70ರಷ್ಟ ಯಾಕೆ ದಲಿತರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಮೇಲ್ಜಾತಿಯವರು ಉತ್ತರ ಕೊಡಬೇಕಾಗಿದೆ ಎಂದು ಅವರು ತಿಳಿಸಿದರು.

ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದರೂ ಪ್ರಧಾನಿ ಈವರೆಗೆ ವೌನ ಮುರಿದಿಲ್ಲ. ಅತ್ಯಾಚಾರದಲ್ಲೂ ತಾರತಮ್ಯ ಧೋರಣೆ ತೋರಿಸ ಲಾಗುತ್ತಿದೆ. ದಲಿತರ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಯಾರು ಚಾಕರ ಎತ್ತುತ್ತಿಲ್ಲ. ಆದುದರಿಂದ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಈ ದೇಶದಲ್ಲಿ ಮೇಲ್ವರ್ಗದವರು ಪ್ರಥಮ ದರ್ಜೆ ಪ್ರಜೆಗಳಾಗಿ ಹಾಗೂ ದಲಿತರು ಶೋಷಿತ ರಾಗಿಯೇ ಉಳಿಯಬೇಕು ಎಂಬುದು ಸಂಘಪರಿವಾರ ಹಾಗೂ ಆರೆಸೆಸ್ ಮನಸ್ಥಿತಿಯಾಗಿದೆ. ಇಂತಹ ಅಮಾನವೀಯ ಮನಸ್ಥಿತಿಯಿಂದಲೇ ಇಂದು ದಲಿತರ ಮೇಲೆ ಹೆಚ್ಚು ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ. ಆರೆಸೆಸ್ ಹಾಗೂ ಸಂಘಪರಿವಾರದ ಈ ಮನಸ್ಥಿತಿಯ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡ ಬೇಕಾದ ಅಗತ್ಯ ಎದುರಾಗಿದೆ ಎಂದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಕಾಂಗ್ರೆಸ್ ನಾಯಕಿ ವರೋನಿಕಾ ಕರ್ನೆಲಿಯೋ ಮಾತನಾಡಿದರು. ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಶಂಕರದಾಸ್, ಪರಮೇಶ್ವರ ಉಪ್ಪೂರು, ಪ್ರಮುಖರಾದ ಯಾಸೀನ್ ಮಲ್ಪೆ, ಇದ್ರೀಸ್ ಹೂಡೆ, ಪ್ರೊ.ಸಿರಿಲ್ ಮಥಾಯಸ್, ಅಫ್ವಾನ್ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪ್ರತಿಭಟನಾ ಜಾಥಾಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥವು ಜೋಡುಕಟ್ಟೆ, ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ ಮೂಲಕ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

‘ದಲಿತರ ಮೇಲಿನ ಹಿಂಸೆ ಹಾಗೂ ಅತ್ಯಾಚಾರದ ಕಾರಣಕ್ಕಾಗಿ ಮುಂದೆ ದಲಿತರಿಗಾಗಿ ಹಳ್ಳಿ, ಜಿಲ್ಲೆ ಹಾಗೂ ಸ್ತಾನವನ್ನೇ ಕೊಡುವಂತೆ ಕೇಳ ಬೇಕಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಇಂದು ಆ ಕಾಲ ಬಂದಿದೆ. ಇದೇ ರೀತಿ ದಲಿತರ ಮೇಲೆ ಅತ್ಯಾಚಾರ ಮುಂದುವರೆದರೆ ದಲಿತ ಸ್ತಾನ ಕೇಳುವ ಪರಿಸ್ಥಿತಿ ಎದುರಾಗಬಹುದು. ನಾವು ಎಂದಿಗೂ ವಿಭಜನೆಯನ್ನು ನಾವು ಕೇಳುತ್ತಿಲ್ಲ. ನೀವು ಕೇಳುವಂತೆ ಮಾಡುತ್ತಿದ್ದೀರಿ’
-ಪ್ರೊ.ಕೆ.ಫಣಿರಾಜ್, ಹಿರಿಯ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News