ಉಡುಪಿಗೆ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಬೇಡ: ಸಿಪಿಎಂ
ಉಡುಪಿ, ಆ.17: ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಎನ್ನುವ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪಿ.ಪಿ.ಪಿ.ಮಾದರಿ(ಖಾಸಗಿ, ಸಾರ್ವಜನಿಕ ಸಹಭಾಗಿತ್ವ) ಕಾಲೇಜು ಸ್ಥಾಪನೆ ಬಗ್ಗೆ ಸರಕಾರದಿಂದ ಹೇಳಿಕೆಗಳು ಬರ ತೊಡಗಿವೆ. ಪಿಪಿಪಿ ಎನ್ನುವುದು ಸಂಪೂರ್ಣ ಖಾಸಗಿಗಿಂತ ಅಪಾಯಕಾರಿ. ಆದುದರಿಂದ ಜಿಲ್ಲೆಯಲ್ಲಿ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಆಗ ಬೇಕು ಎಂದು ಸಿಪಿಐಎಂ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಪಿಪಿಪಿ ಮಾದರಿಯ ಕೆಟ್ಟ ಅನುಭವ ಬಿ.ಆರ್.ಶೆಟ್ಟಿ ಸಂಸ್ಥೆಯಿಂದ ಆಗಿದೆ. ಲಾಭ ಸಿಕ್ಕಿದಾಗ ದೋಚಿಕೊಂಡು, ನಷ್ಟ ಆದಾಗ ಜನತೆಯನ್ನು ಬೀದಿ ಪಾಲು ಮಾಡುವ ವ್ಯವಸ್ಥೆ ಉಡುಪಿ ಜಿಲ್ಲೆಗೆ ಬೇಡ. ಜನರ ಭೂಮಿ, ವಿದ್ಯುತ್, ನೀರು ಇತ್ಯಾದಿ ಉಚಿತವಾಗಿ ಪಡೆದು ತಾವು ಕನಿಷ್ಟ ಶೇ.50 ಸೀಟುಗಳನ್ನು ಉಳಿಸಿಕೊಳ್ಳುವ ಕುತಂತ್ರ ಖಾಸಗಿಯವರದ್ದು. ಇದರಿಂದ ನೂರಕ್ಕೆ ನೂರರಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗುವ ಸೀಟು, ಕೋಟಿ ಕೋಟಿ ಹಣ ನೀಡುವವರ ಪಾಲಾಗುತ್ತದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.