×
Ad

ರಥಕ್ಕೆ ತಡೆ ಒಡ್ಡಿರುವ ಕೃತ್ಯ ದೇಶದ್ರೋಹಕ್ಕೆ ಸಮಾನ: ಶಾಸಕ ರಾಜೇಶ್ ನಾಯ್ಕ್

Update: 2021-08-17 22:55 IST

ಬಂಟ್ವಾಳ, ಆ.17: ಪುತ್ತೂರು ತಾಲೂಕಿನಲ್ಲಿ ಸ್ವಾತಂತ್ರ್ಯಹೋರಾಟಗಾರರ ರಥಕ್ಕೆ ತಡೆ ಒಡ್ಡಿರುವ ಕಿಡಿಗೇಡಿಗಳ ಕೃತ್ಯ ದೇಶದ್ರೋಹಕ್ಕೆ ಸಮಾನವಾಗಿದ್ದು ಇದನ್ನು ತೀವ್ರವಾಗಿ ಖಂಡಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. 

ಬಿ.ಸಿ.ರೋಡಿನ ಬಿಜೆಪಿ‌ ಕಚೇರಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅನ್ನು ಅಪಮಾನಿಸಿದ್ದು ದೇಶಕ್ಕೆ ಅವಮಾನಿಸಿದಂತೆ ಎಂದ ಅವರು ಈ ಕೃತ್ಯ ಎಸಗಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ‌ ಒತ್ತಡ ಹೇರುವುದಾಗಿ ಅವರು ತಿಳಿಸಿದರು. 

ಕಳೆದ ಮೂರು ವರ್ಷಗಳಲ್ಲಿ ದ.ಕ.ಜಿಲ್ಲೆ ಯಾವುದೇ ಕೋಮುಗಲಭೆಯಿಲ್ಲದೆ‌ ಶಾಂತಿಯುತವಾಗಿದ್ದು ಇದೀಗ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನ ನಡೆಯುತ್ತಿದ್ದು ಇಂತಹ ಕಿಡಿಗೇಡಿಗಳನ್ನು ಆರಂಭಿಕ ಹಂತದಲ್ಲೇ ಪೊಲೀಸ್ ಇಲಾಖೆ ಗುರುತಿಸಿ‌ ಮಟ್ಟಹಾಕಬೇಕು ಎಂದು ಶಾಸಕರು ಹೇಳಿದ್ದಾರೆ.

ಬಿಜೆಪಿ ಮಂಡಲ‌ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಯವರು ಮಾತನಾಡಿ, ಎಸ್ ಡಿಪಿಐಯನ್ನು ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ‌ ಮಾಡಬೇಕೆಂದರು. ಕಾಂಗ್ರೆಸ್ ಹಾಗೂ ಎಸ್ ಡಿ ಪಿ ಐ ಮೈತ್ರಿ ಮಾಡಿಕೊಂಡು ಬಂಟ್ವಾಳ ಪುರಸಭೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಎಸ್ ಡಿಪಿಐ ಬಂಟ್ವಾಳ ಪರಿಸರದಲ್ಲಿ ರಹಸ್ಯವಾಗಿ‌ ಕೆಲ ಚಟ ಕಾನೂನಬಾಹಿರ ಚಟುವಟಿಕೆಯಲ್ಲಿ ತೊಡಗಿಸುತ್ತೊರುವ ಬಗ್ಗೆ ಮಾಹಿತಿಯು ಇದ್ದು ದೇಶದ್ರೋಹದ ಕೆಲಸ ಮಾಡುವ ಕಾಂಗ್ರೇಸ್ ಹಾಗೂ ಎಸ್ ಡಿ ಪಿ ಐ ವಿರುದ್ಧ ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟಿತ ಹೋರಾಟದ ಮೂಲಕ ಎದುರಿಸಲಿದೆ ಎಂದರು. 

ಕಬಕ ಘಟನೆ ಕುರಿತಾಗಿ  ಕಾಂಗ್ರೇಸ್ ಮೌನವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಸರಕಾರ ಇದ್ದಾಗ  ಎಸ್ ಡಿಪಿಐ ಮೇಲೆ   ಮೃಧುಧೋರಣೆ ತೋರಿದ್ದೆ ಈ ರೀತಿಯ ಕೃತ್ಯ ನಡೆಸಲು ಕಾರಣ ಎಂದರು. 

ಕಾಂಗ್ರೆಸ್ ಪುರಸಭಾ ಸದಸ್ಯರೊಬ್ಬರು ರಾಷ್ಟ್ರ ಗೀತೆಯನ್ನು ತಪ್ಪುತಪ್ಪಾಗಿ ಹೇಳಿದ್ದನ್ನು ಪ್ರಸ್ತಾಪಿಸಿದ ಅವರು, ಇದು ಗೊತ್ತಿದ್ದು ಮಾಡಿದ ತಪ್ಪೇ ಅಥವಾ ಎಸ್ ಡಿಪಿಐ ಪ್ರೇರಿತ ಕೃತ್ಯವೋ ಎಂದು ಪ್ರಶ್ನಿಸಿದರಲ್ಲದೆ ಇದಕ್ಕೆ  ಸ್ಪಷ್ಟನೆ ನೀಡಬೇಕು ಎಂದರು. 

ಉಳ್ಳಾಲ ಹಾಗೂ ಕಬಕದಲ್ಲಿ ನಡೆದಿರುವ ಎರಡು ವಿದ್ಯಮಾನಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಶಾಸಕರ ಮುಖೇನ ಸರ್ಕಾರದ ಗಮನಸೆಳೆಯುವುದಾಗಿ ತಿಳಿಸಿದರು. 

ಪ್ರ.ಕಾರ್ಯದರ್ಶಿಗಳಾದ  ರವೀಶ್ ಶೆಟ್ಟಿ ,ಡೊಂಬಯ ಅರಳ,ಪ್ರಮುಖರಾದ ಮೋನಪ್ಪ ದೇವಸ್ಯ, ರೋನಾಲ್ಡ್ ಡಿಸೋಜ ಅಮ್ಟಾಡಿ, ಪ್ರಕಾಶ್ ಅಂಚನ್,ರತ್ನಕುಮಾರ್ ಚೌಟ,ಗಣೇಶ್ ರೈ ಮಾಣಿ,ಪುರುಷೋತ್ತಮ ಶೆಟ್ಟಿ,ಕೇಶವ ದೈಪಲ,ಸುರೇಶ್ ಕೋಟ್ಯಾನ್, ಹರೀಶ್ ಪಡು ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News