×
Ad

ಮಗುವಿನ ಶಸ್ತ್ರಕ್ರಿಯೆಗೆ ನೆರವಾಗಲು ಒಲಿಂಪಿಕ್ಸ್ ಪದಕವನ್ನೇ ಹರಾಜು ಹಾಕಿದ ಆಟಗಾರ್ತಿ

Update: 2021-08-18 17:01 IST
ಮರಿಯಾ ಆಂಡ್ರೆಜಿಝೈಕ್ (Photo: Twitter/Front Office Sports)

ಹೊಸದಿಲ್ಲಿ: ಪೋಲೆಂಡ್‍ನ ಜಾವೆಲಿನ್ ಎಸೆತಗಾರ್ತಿ ಮರಿಯಾ ಆಂಡ್ರೆಜಿಝೈಕ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಹರಾಜು ಹಾಕಿ ಅದರಿಂದ ದೊರಕಿದ ನಿಧಿಯನ್ನು ಎಂಟು ತಿಂಗಳ ಮಗು ಪೋಲ್ ಮಿಲೋಝೆಕ್‍ನ ಹೃದಯ ಶಸ್ತ್ರಚಿಕಿತ್ಸೆಗೆ ದೇಣಿಗೆ ನೀಡಿದ್ದಾರೆ.

2016ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಸ್ವಲ್ಪದರಲ್ಲಿಯೇ ಪದಕ ವಂಚಿತೆಯಾಗಿದ್ದ ಮರಿಯಾ 2017ರಲ್ಲಿ ಭುಜದ ಗಾಯದಿಂದಾಗಿ ಭಾಗವಹಿಸಿರಲಿಲ್ಲ. ನಂತರ 2018ರಲ್ಲಿ ಆಕೆಗೆ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ಚಿಕಿತ್ಸೆ ಪಡೆದು ಗುಣಮುಖರಾದ ಆಕೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದಾರೆ, ಇದು ಅವರ ಮೊದಲ ಒಲಿಂಪಿಕ್ಸ್ ಪದಕವಾಗಿದೆ.

ಗಂಭೀರ ಸ್ಥಿತಿಯಲ್ಲಿರುವ ಮಗುವಿನ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲಾಗುತ್ತಿರುವ ಕುರಿತು ಆಕೆ ಫೇಸ್ ಬುಕ್ ಮೂಲಕ ತಿಳಿದುಕೊಂಡಿದ್ದರು. ಈ ಶಸ್ತ್ರಚಿಕಿತ್ಸೆಗೆ 1.5 ಮಿಲಿಯನ್ ಪೋಲಿಶ್ ಝ್ಲೋಟಿ (ರೂ. 2.86 ಕೋಟಿ) ಅಗತ್ಯವಿದೆ ಎಂದು ತಿಳಿದು ತಮ್ಮ ಪದಕವನ್ನು ಹರಾಜು ಹಾಕಿದ್ದು ಅದಕ್ಕೆ ಬಿಡ್ ಅನ್ನು ಪೋಲಿಶ್ ಸ್ಟೋರ್ ಝಬ್ಕಾ ಗೆದ್ದಿದೆ ಎಂದು ಮರಿಯಾ ದೃಢೀಕರಿಸಿದ್ದಾರೆ. ಈ ಮೂಲಕ ಮಗುವಿನ ಚಿಕಿತ್ಸೆಗೆ ಅವರು ರೂ. 1.4 ಕೋಟಿ ದೇಣಿಗೆ ನೀಡಿದ್ದಾರೆ.

ಈ ನಡುವೆ ಬಿಡ್ ಗೆದ್ದ ಝಬ್ಕಾ ಬೆಳ್ಳಿ ಪದಕವನ್ನು ಮರಿಯಾ ಅವರಿಗೇ ವಾಪಸ್ ನೀಡಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News