ಬ್ರಿಟನ್: ಸರಕಾರಿ ಗೋಪ್ಯತೆ ಕಾಯ್ದೆಯ ಪ್ರಸ್ತಾವಿತ ಬದಲಾವಣೆಗೆ ಪತ್ರಕರ್ತರ ಆತಂಕ

Update: 2021-08-18 18:23 GMT

ಲಂಡನ್, ಆ.18: ಬ್ರಿಟನ್‌ನ ಸರಕಾರಿ ಗೋಪ್ಯತೆ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸುವ ಸರಕಾರದ ಪ್ರಸ್ತಾವನೆಗೆ ಅಲ್ಲಿನ ತನಿಖಾ ಪತ್ರಕರ್ತರು ಹಾಗೂ ಮಾಧ್ಯಮ ಹಕ್ಕುಗಳ ಸಂಘಟನೆಗಳು ತೀವ್ರ ವಿರೋಧ ಮತ್ತು ಆತಂಕ ಸೂಚಿಸಿವೆ ಎಂದು ವರದಿಯಾಗಿದೆ. ಸರಕಾರಿ ಗೋಪ್ಯತೆ ಕಾಯ್ದೆಯ ಪ್ರಕಾರ, ಕೆಲವು ವಿಧದ ವರ್ಗೀಕೃತ ಸುದ್ಧಿಗಳನ್ನು ಸರಕಾರಿ ಸಿಬಂದಿಗಳು ಹೊರಗೆಡಹುವುದು ಮತ್ತು ಇದನ್ನು ಪತ್ರಕರ್ತರು ಪ್ರಕಟಿಸುವುದು ಕ್ರಿಮಿನಲ್ ಅಪರಾಧವಾಗಿದೆ.

ಈ ಕಾಯ್ದೆಯನ್ನು 1989ರಲ್ಲಿ ಕೊನೆಯ ಬಾರಿಗೆ ಪರಿಷ್ಕರಿಸಲಾಗಿತ್ತು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಬೇಹುಗಾರಿಕೆ ನಡೆಸುವುದು ಮತ್ತು ರಹಸ್ಯ ಮಾಹಿತಿ ಸೋರಿಕೆಯ ಪ್ರಕ್ರಿಯೆ ಹೆಚ್ಚಿದೆ. ಆದ್ದರಿಂದ ಸರಕಾರದ ರಹಸ್ಯ ದಾಖಲೆಗಳನ್ನು ರಕ್ಷಿಸುವ ಸಾಮರ್ಥ್ಯ ಹೆಚ್ಚಿಸಲು ಈ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಬೇಕಿದೆ ಎಂದು ಬ್ರಿಟನ್‌ನ ಗೃಹ ಸಚಿವಾಲಯದ ಅಧಿಕಾರಿಗಳು ಇತ್ತೀಚೆಗೆ ಹೇಳಿದ್ದರು. ಆದರೆ, ಕಾಯ್ದೆಯಡಿ ಸೇರುವ ಮಾಹಿತಿಯ ವ್ಯಾಪ್ತಿ ವಿಸ್ತರಣೆ, ನಿಯಮ ಉಲ್ಲಂಸಿದವರಿಗೆ ವಿಧಿಸುವ ಶಿಕ್ಷೆಯನ್ನು ಹೆಚ್ಚಿಸುವ ಈ ಪ್ರಸ್ತಾವನೆಯು ಸರಕಾರವನ್ನು ಉತ್ತರದಾಯಿತ್ವಗೊಳಿಸದಂತೆ ಮಾಧ್ಯಮವನ್ನು ತಡೆಯುತ್ತದೆ ಎಂದು ಪತ್ರಕರ್ತರು ಹಾಗೂ ಮಾಧ್ಯಮ ಹಕ್ಕುಗಳ ಸಂಘಟನೆ ಹೇಳಿದೆ. ಪ್ರಸ್ತಾವಿತ ಬದಲಾವಣೆ ಸರಕಾರದ ಹಿತಾಸಕ್ತಿ ಹಾಗೂ ಜನರ ಹಿತಾಸಕ್ತಿಯ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅಭಿವ್ಯಕ್ತ ಸ್ವಾತಂತ್ರ್ಯದ ಅಭಿಯಾನ ನಡೆಸುತ್ತಿರುವ ‘ಇಂಡೆಕ್ಸ್ ಆನ್ ಸೆನ್ಸಾರ್‌ಷಿಪ್’ನ ಪ್ರಭಾರೀ ಸಂಪಾದಕ ಹಾಗೂ ತನಿಖಾ ಪತ್ರಕರ್ತ ಮಾರ್ಟಿನ್ ಬ್ರೈಟ್ ಆತಂಕ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರು ಹಾಗೂ ಅಕ್ರಮ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂಘಟನೆಗಳು ಸೇರಿಕೊಂಡು ಬ್ರಿಟನ್‌ನಲ್ಲಿ ಹಲವು ಪ್ರಮುಖ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯ ಪ್ರಕರಣಗಳನ್ನು ಬಯಲಿಗೆಳೆದಿವೆ. ಬಂಧನ, ವಿಚಾರಣೆ ಸಂದರ್ಭದ ಚಿತ್ರಹಿಂಸೆಯ ವಿಷಯದಲ್ಲಿ ಬ್ರಿಟನ್‌ನ ಗುಪ್ತಚರ ವ್ಯವಸ್ಥೆ ಎಂಐ6 ಹಾಗೂ ಅಮೆರಿಕದ ಗುಪ್ತಚರ ಇಲಾಖೆ ಸಿಐಎ ನಡುವಿನ ಸಾಮ್ಯತೆಯನ್ನು 2000ನೇ ಇಸವಿಯಲ್ಲಿ ಮಾಧ್ಯಮ ಬಯಲಿಗೆಳೆದಿತ್ತು. ಸಂಸತ್ತಿನ ವೆಚ್ಚಖಾತೆಯ ವ್ಯವಸ್ಥೆಯನ್ನು ಸಂಸದರು ಯಾವ ರೀತಿ ದುರುಪಯೋಗ ಪಡಿಸುತ್ತಿದ್ದಾರೆ ಎಂಬುದನ್ನು 2009ರಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. ಪಾಶ್ಚಿಮಾತ್ಯ ದೇಶಗಳು ನಡೆಸುವ ಸಾಮೂಹಿಕ ಗೂಢಚಾರಿಕೆ ಪ್ರಕರಣಗಳ ಬಗ್ಗೆ 2013ರಲ್ಲಿ ಪತ್ರಕರ್ತರು ಬೆಳಕು ಚೆಲ್ಲಿದ್ದರು. ಸಮಾಜದಲ್ಲಿ ಬದಲಾವಣೆ ತರುವ ಹಲವು ನಿರ್ಣಾಯಕ ಘಟನೆಗಳ ಬಗ್ಗೆ, ಅಧಿಕಾರದಲ್ಲಿ ಇರುವವರು ತಪ್ಪೆಸಗಿ ಮುಚ್ಚಿಡುವ ಪ್ರಯತ್ನಗಳನ್ನು ಮಾಧ್ಯಮದವರು ಮಾಡಿದ್ದಾರೆ. ಈಗ ಸರಕಾರ ಮಾಡಹೊರಟಿರುವ ಬದಲಾವಣೆ ಮಾಧ್ಯಮದವರ ಕೈಗಳನ್ನು ಕಟ್ಟಿಹಾಕಲಿದೆ ಎಂದು ತನಿಖಾ ಪತ್ರಕರ್ತ ಡಂಕನ್ ಕ್ಯಾಂಬೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News