ಮಲೇಶ್ಯಾದ ನೂತನ ಪ್ರಧಾನಿಗೆ ವಿಶ್ವಾಸಮತ ಸಾಬೀತುಪಡಿಸುವ ಸವಾಲು
Update: 2021-08-18 23:53 IST
ಕೌಲಲಾಂಪುರ, ಆ.18: ಮಲೇಶ್ಯಾದ ನೂತನ ಪ್ರಧಾನಿಯನ್ನು ದೊರೆ ಶೀಘ್ರ ಹೆಸರಿಸಲಿದ್ದಾರೆ. ಆದರೆ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ರಾಜಭವನದ ಹೇಳಿಕೆ ತಿಳಿಸಿದೆ. ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮುಹಿಯುದ್ದೀನ್ ಯಾಸಿನ್ ಸೋಮವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು ಈಗ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿದಿದ್ದಾರೆ.
ಇದರಿಂದ ಮಲೇಶ್ಯಾದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಸಂಸತ್ತಿನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ, ಪ್ರಧಾನಿಯಾಗಿ ಆಯ್ಕೆಯಾಗುವವರು ಮೈತ್ರಿಕೂಟ ರಚಿಸಿಕೊಂಡು ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ. ಬಹುಮತ ಸಾಬೀತುಪಡಿಸುವ ಸಾಮರ್ಥ್ಯವಿದೆ ಎಂದು ದೊರೆ ಅಲ್ ಸುಲ್ತಾನ್ ಅಬ್ದುಲ್ಲಾ ವಿಶ್ವಾಸವಿರಿಸುವ ಮುಖಂಡರು ಪ್ರಧಾನಿಯಾಗಿ ನೇಮಕವಾಗಲಿದ್ದಾರೆ. ಪ್ರಧಾನಿಯಾಗಿ ನೇಮಕಗೊಳಿಸಬಹುದಾದ ಮುಖಂಡರ ಹೆಸರನ್ನು ಸೂಚಿಸುವಂತೆ ದೊರೆ ಎಲ್ಲಾ ಸಂಸದರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.