×
Ad

ಪೊಲೀಸ್ ಇಲಾಖೆಯ ಜವಾಬ್ದಾರಿ ಸವಾಲಿನದ್ದು: ಐಜಿಪಿ ದೇವಜ್ಯೋತಿ ರೇ

Update: 2021-08-21 13:59 IST

ಮಂಗಳೂರು, ಆ.21: ಪೊಲೀಸ್ ಇಲಾಖೆಯಲ್ಲಿ ಜವಾಬ್ದಾರಿ ನಿಭಾಯಿಸೋದು ಸುಲಭವಾದ ಮಾತಲ್ಲ. ಕ್ಲಿಷ್ಟವೂ, ಸವಾಲಿನ ಕೆಲಸವೂ ಹೌದು. ಆದರೆ ಪೊಲೀಸ್ ಇಲಾಖೆ ದೊಡ್ಡ ಪರಿವಾರವಿದ್ದಂತೆ ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅಭಿಪ್ರಾಯಿಸಿದ್ದಾರೆ.

ಅಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ಆಯೋಜನೆಗೊಂಡಿರುವ ಪೊಲೀಸ್ ಹುದ್ದೆ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪೊಲೀಸ್ ಇಲಾಖೆಯ ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಈ ಕಾರ್ಯಾಗಾರ ಉತ್ತಮ ಅವಕಾಶ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಕಡೆಗಳಲ್ಲಿ ಉದ್ಯೋಗದ ಕೊರತೆಯೂ ಕಂಡುಬರುತ್ತಿದೆ. ಆದ್ದರಿಂದ ಈಗ ತಮಗೆ ದೊರೆತಿರುವ ಅವಕಾಶವನ್ನು ಕಠಿಣ ಪರಿಶ್ರಮದಿಂದ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಒಂದು ತಿಂಗಳ ತರಬೇತಿ ಕಾರ್ಯಾಗಾರವು ಪೂರ್ಣ ಪ್ರಮಾಣದ ಇಲಾಖೆಯ ತರಬೇತಿಯಲ್ಲ. ಪೊಲೀಸ್ ಇಲಾಖೆಯಲ್ಲಿ ಜವಾಬ್ದಾರಿಯಿಂದ ನಿಭಾಯಿಸಲು ಬೇಕಾದ ವೈಯಕ್ತಿಕ ಶ್ರಮ ಅಗತ್ಯ ಎಲ್ಲಾ ಅಭ್ಯರ್ಥಿಗಳಲ್ಲಿ ಅವಶ್ಯವಾಗಿ ಬೇಕಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್., ಡಿಸಿಪಿ ಹರಿರಾಂ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News