ನಾನು ಬಲಿಪಶುವಾಗಿದ್ದೇನೆ, ಬಿಸಿಸಿಐ ಮಧ್ಯಪ್ರವೇಶಿಸಬೇಕು: ಪರ್ವೇಝ್ ರಸೂಲ್

Update: 2021-08-21 10:18 GMT
photo: twitter

ಜೈಪುರ: ''ಮೈದಾನಕ್ಕೆ ವಾಪಸ್ ಆಗಬೇಕು ಇಲ್ಲವೇ ಪೊಲೀಸ್ ಕ್ರಮ" ವನ್ನು ಎದುರಿಸುವಂತೆ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ (JKCA)  ಆಲ್ ರೌಂಡರ್ ಪರ್ವೇಝ್ ರಸೂಲ್‌ಗೆ ನೋಟಿಸ್ ನೀಡಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ರಸೂಲ್, ನಾನು 'ಬಲಿಪಶುವಾಗಿದ್ದೇನೆ'  ಈ ವಿಷಯ ಕೈ ಮೀರುವ ಮುನ್ನ ಭಾರತೀಯ ಕ್ರಿಕೆಟ್ ಮಂಡಳಿ ಈಗ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

"ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದು ಕ್ರಿಕೆಟ್ ಮಂಡಳಿ ಹೇಳಿದೆ. ನಿಮ್ನನ್ನು ಉರುಳಿಸಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಇ-ಮೇಲ್ ಕಳುಹಿಸಿದೆ. ನನ್ನನ್ನು ಉರುಳಿಸಲು ಅವರ ಉದ್ದೇಶವು ವಿಭಿನ್ನವಾಗಿ ಕಾಣುತ್ತದೆ” ಎಂದು ಭಾರತೀಯ ತಂಡವನ್ನು ಪ್ರತಿನಿಧಿಸುವ  ಜಮ್ಮು-ಕಾಶ್ಮೀರದ ಏಕೈಕ ಆಟಗಾರ ರಸೂಲ್ ಶುಕ್ರವಾರ 'ಇಂಡಿಯನ್ ಎಕ್ಸ್‌ಪ್ರೆಸ್ ' ಗೆ ತಿಳಿಸಿದರು.

ನನಗೆ ನೇಣು ಹಾಕಿಕೊಳ್ಳಲು ಉದ್ದನೆಯ ಹಗ್ಗವನ್ನು ನೀಡಬೇಕೆಂದು ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ  ಬರೆದಾಗ  ಇನ್ನಷ್ಟು ಬೇಸರವಾಯಿತು ಎಂದು 32ರ ಹರೆಯದ ರಸೂಲ್ ಹೇಳಿದ್ದಾರೆ. ರಸೂಲ್ ಪ್ರಕಾರ, ಅಧಿಕಾರಿ ನಂತರ ತನ್ನ ಕಾಮೆಂಟ್ ಅನ್ನು ಅಳಿಸಿದ್ದರು.

“ಅಧಿಕಾರಿಯು ತನ್ನ ಕಾಮೆಂಟ್ ಅನ್ನು ಅಳಿಸಿದ್ದಾರೆ. ಆದರೆ ಅದರ ಸ್ಕ್ರೀನ್‌ಶಾಟ್ ನನ್ನ ಬಳಿ ಇದೆ. ನನ್ನನ್ನು ಗಲ್ಲಿಗೇರಿಸುವಂತಹ ತಪ್ಪು ಏನು ಮಾಡಿದೆ ಎಂದು ಯಾರಾದರೂ ಹೇಳಬಹುದೇ? ನಿಮಗೆ ಏನಾದರೂ ಸಂದೇಹಗಳಿದ್ದರೆ,  ಅವರು ನನಗೆ ಕರೆ ಮಾಡಬಹುದು. ಸ್ಪಷ್ಟಪಡಿಸಲು ಕೇವಲ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಅವರು ನನ್ನನ್ನು ಬಲಿಪಶು ಮಾಡಲು ಬಯಸಿದ್ದಾರೆ ಎಂದು ತೋರುತ್ತದೆ ”ಎಂದು ರಸೂಲ್ ಹೇಳಿದ್ದಾರೆ.

ಬಿಸಿಸಿಐ ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿಯನ್ನು ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶ ನೀಡಿದ ನಂತರ ಜೂನ್ ನಲ್ಲಿ ಜೆಕೆಸಿಎ ಆಡಳಿತಗಾರರ ಸಮಿತಿ ಅಸ್ತಿತ್ವಕ್ಕೆ ಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News