×
Ad

ಹೊಸ ರೂಪಗಳಲ್ಲಿ ಚಿನ್ನ ಅಕ್ರಮ ಸಾಗಾಟ ಯತ್ನ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ವಶ

Update: 2021-08-21 17:05 IST

ಮಂಗಳೂರು, ಆ. 21: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 350.330 ಗ್ರಾಂ. (ಅಂದಾಜು 16.85 ಲಕ್ಷ ರೂ. ಮೌಲ್ಯ) ಹಾಗೂ 115 ಗ್ರಾಂ (ಅಂದಾಜು 5.58 ಲಕ್ಷ ರೂ. ಮೌಲ್ಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ವಿದೇಶಗಳಿಂದ ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರು ಕೆಲವರು ಅಕ್ರಮ ಚಿನ್ನ ಸಾಗಾಟಕ್ಕೆ ವಿನೂತನ ಮಾದರಿಗಳನ್ನು ಕಂಡುಕೊಳ್ಳುತ್ತಿದ್ದು, ಕಸ್ಟಮ್ಸ್ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ, ಗಸ್ತಿನ ಮೂಲಕ ಇಂತಹ ಕಳ್ಳಸಾಗಾಟವನ್ನು ಪತ್ತೆಹಚ್ಚುತ್ತಿದ್ದಾರೆ. ಹಾಗಿದ್ದರೂ ಕಳ್ಳ ಸಾಗಾಟಕ್ಕೆ ಹೊಸ ಹೊಸ ರೀತಿಗಳನ್ನು ಕಂಡುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಸ್ಟಮ್ಸ್ ಆಯುಕ್ತರಾದ ಇಮಾಮುದ್ದೀನ್ ಅಹ್ಮದ್, ಇಂತಹ ಅಕ್ರಮ ಪ್ರಕರಣಗಳನ್ನು ಬೇಧಿಸಲು ಸದಾ ಎಚ್ಚರಿಕೆ ಹಾಗೂ ಕಣ್ಗಾವಲು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ದುಬೈನಿಂದ ಮಂಗಳೂರು ಮೂಲಕ ಕಾಸರಗೋಡಿಗೆ ಆಗಮಿಸಿದ ಪುರುಷ ಪ್ರಯಾಣಿಕರೊಬ್ಬರು ಮಿಕ್ಸಿ ಬ್ಲೆಂಡರ್‌ನ ಆರ್ಮೆಚರ್ ಭಾಗದಲ್ಲಿ 350.330 ಗ್ರಾಂ ತೂಕದ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಿಸಲೆತ್ನಿಸಿದ್ದರು. ಮನೋಕರ್ತಾಯಿನಿ ನೇತೃತ್ವದ ಕಸ್ಟಮ್ಸ್ ಅಧಿಕಾರಿಗಳ ತಂಡ ಕಾರ್ಯಾಚರಣೆಯ ಮೂಲಕ ಈ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ 115 ಗ್ರಾಂ ತೂಕದ ಚಿನ್ನವನ್ನು ಮಹಿಳೆಯರು ಧರಿಸುವ ಹೇರ್‌ ಬ್ಯಾಂಡ್‌ನ ಮಣಿಗಳ ಒಳಗಡೆಯ ಸರಿಗೆಯ ರೂಪದಲ್ಲಿ ಚಿನ್ನವನ್ನು ಆಕ್ರಮ ಸಾಗಾಟ ಮಾಡುತ್ತಿದ್ದುದನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಆಗಮಿಸಿ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ವ್ಯಕ್ತಿಯಿಂದ ಈ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಹಚ್ಚಲಾಗಿದೆ. ಈ ಕಾರ್ಯಾಚರಣೆಯನ್ನು ರಾಕೇಶ್ ನೇತೃತ್ವದ ಕಸ್ಟಮ್ಸ್ ಅಧಿಕಾರಿಗಳ ತಂಡ ನಿರ್ವಹಿಸಿದೆ. ಕಸ್ಟಮ್ಸ್ ಆಯುಕ್ತರಾದ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತರಾದ ಜಾನ್ಸ್ ಜಾರ್ಜ್‌ ಅವರ ಮಾರ್ಗದರ್ಶನ ಹಾಗೂ ಸಹಾಯಕ ಆಯುಕ್ತ ವಾಸುದೇವ ನಾಯ್ಕ್ ಡಿ. ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಎರಡೂ ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News