×
Ad

ಮಂಗಳೂರು: ನಕಲಿ ವೈದ್ಯ ಶ್ರೀನಿವಾಸ್ ಬಂಧನ

Update: 2021-08-21 20:02 IST

ಮಂಗಳೂರು, ಆ.21: ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯನೆಂದು ಹೇಳಿಕೊಂಡು ನಗರದ ಕೆಲವು ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡಿ ಬಳಿಕ ಹಣ ಕೊಡದೆ ವಂಚಿಸುತ್ತಿದ್ದ ಆರೋಪಿಯನ್ನು ಬಂದರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶ್ರೀನಿವಾಸ್ (55) ಎಂದು ಹೇಳಲಾದ ವ್ಯಕ್ತಿಯೊಬ್ಬ ಏಮ್ಸ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಮತ್ತು ಸರ್ಜನ್ ಎಂದು ಹೇಳಿಕೊಂಡು ಆ ಸಂಸ್ಥೆಯ ನಕಲಿ ಐಡಿಯನ್ನು ಸೃಷ್ಟಿಸಿದ್ದ ಎನ್ನಲಾಗಿದೆ. ಮಾನಸಿಕ ಅಸ್ವಸ್ಥನಾಗಿರುವ ಈತ ಐಡಿಯನ್ನು ತೋರಿಸಿ ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ರೆಸಿಡೆನ್ಸಿಯಲ್ಲಿ ರೂಮ್ ಪಡೆದುಕೊಂಡು ವಾಸ್ತವ್ಯ ಹೂಡಿದ್ದ. ರೂಮ್ ಬಿಡುವ ವೇಳೆ 4 ಸಾವಿರ ರೂ. ನೀಡದೆ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಈ ಬಗ್ಗೆ ಹೊಟೇಲ್ ಮಾಲಕರು ಬಂದರು ಪೊಲೀಸರಿಗೆ ದೂರು ನೀಡಿದ್ದರು. ಈ ವ್ಯಕ್ತಿಯು ನಗರದ ನವಭಾರತ್ ಸರ್ಕಲ್ ಬಳಿಯ ಹೊಟೇಲೊಂದಕ್ಕೂ ಈ ರೀತಿ ಮೋಸ ಮಾಡಿರುವುದು ಬಹಿರಂಗವಾಗಿದೆ. ಬಂದರು ಪೊಲೀಸರು ಪ್ರಕರಣದ ಗಂಭೀರತೆ ಅರಿತು ಎಸಿಪಿ ಪಿಎ ಹೆಗಡೆ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದರು. ಕೊನೆಗೂ ಬಂದರು ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ವ್ಯಕ್ತಿಯ ಎಲ್ಲಿಯ ನಿವಾಸಿ ಎಂಬುದು ಖಚಿತಗೊಂಡಿಲ್ಲ. ಈ ಹಿಂದೆ ತಮಿಳುನಾಡಿನ ಸೇಲಂ ಬಳಿಯೂ ವಂಚನೆ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿದ್ದಾನೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News