×
Ad

'60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಗುರಿಯನ್ನು ಪೂರ್ಣಗೊಳಿಸಿ'

Update: 2021-08-21 20:59 IST

ಉಡುಪಿ, ಆ.21: ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡುವುದರ ಮೂಲಕ ಹಿರಿಯ ವ್ಯಕ್ತಿಗಳು ಕೋವಿಡ್‌ಗೆ ಬಲಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.

ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಜಿಲ್ಲಾ ಪರಿಣಿತರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಈಗಾಗಲೇ ಮೊದಲ ಡೋಸ್ ಪಡೆದು, ಎರಡನೇ ಡೋಸ್ ಬಾಕಿ ಇರುವ ಹಿರಿಯ ನಾಗರಿಕರ ವಿವರಗಳನ್ನು ಪಡೆದು ಅವರಿಗೆ ಅವರ ವಾಸಸ್ಥಳದ ಸಮೀಪವೇ ಲಸಿಕೆಗೆ ವ್ಯವಸ್ಥೆ ಮಾಡಿ. ಖಾಸಗಿಯಾಗಿ ಈಗಾಗಲೇ ಲಸಿಕೆ ಪಡೆ ದಿರುವ ಹಿರಿಯ ನಾಗರಿಕರ ವಿವರಗಳನ್ನೂ ಸಹ ಪಡೆದು, ಅವರಿಗೂ ಲಸಿಕೆಗೆ ವ್ಯವಸ್ಥೆ ಮಾಡಿ. ಗ್ರಾಮಾಂತರ ಪ್ರದೇಶದಲ್ಲಿ ಸಹ ಅಲ್ಲಿಯೇ ಕ್ಯಾಂಪ್ ಏರ್ಪಡಿಸಿ ಲಸಿಕೆ ನೀಡಲು ವ್ಯವಸ್ಥೆ ಮಾಡಿ. ಜಿಲ್ಲೆಯಲ್ಲಿರುವ ಎಲ್ಲಾ ಹಿರಿಯ ನಾಗರಿಕರಿಗೆ ಎರಡೂ ಡೋಸ್ ಲಸಿಕೆ ನೀಡುವುದರ ಮೂಲಕ ಅವರು ಕೋವಿಡ್‌ಗೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟರಿಗೆ ಲಸಿಕೆ ನೀಡಲು 4,13,861 ಗುರಿ ಹೊಂದಿದ್ದು, ಇದುವರೆಗೆ 3,32,255 ಮಂದಿಗೆ ಪ್ರಥಮ ಡೋಸ್ ನೀಡಿ ಶೇ.80 ಸಾಧನೆ ಆಗಿದೆ. 1,69,499 ಮಂದಿಗೆ ಎರಡನೇ ಡೋಸ್ ನೀಡಿ ಶೇ. 41ಸಾಧನೆಯಾಗಿದ್ದು, ಹಿರಿಯ ನಾಗರಿಕರಿಗೆ ಶೇ.100ರಷ್ಟು ಎರಡೂ ಲಸಿಕೆ ನೀಡುವ ಯೋಜನೆಯನ್ನು ರೂಪಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಲ್ಲಾ ಖಾಸಗಿ ಅಸ್ಪತ್ರೆಗಳಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣ ಹೊಂದಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪರೀಕ್ಷೆಯನ್ನು ಹೆಚ್ಚುಗೊಳಿಸಲಾಗಿದ್ದು, ಸ್ವಾಬ್ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಲು ಕ್ರಮ ಕೈಗೊಳ್ಳಿ, ಲ್ಯಾಬ್‌ನಲ್ಲಿ ಪರೀಕ್ಷಾ ವರದಿ ನೀಡಲು ವಿಳಂಬವಾದಲ್ಲಿ ಪಕ್ಕದ ಜಿಲ್ಲೆಗಳಿಗೆ ಸ್ವಾಬ್ ಕಳುಹಿಸಿ ನಿಗದಿತ ಅವಧಿಯೊಳಗೆ ವರದಿ ಪಡೆಯುವಂತೆ ಹೇಳಿದರು.

ಜಿಲ್ಲೆಯಲ್ಲಿ ಆಕ್ಸಿಜಿನ್ ಪ್ಲಾಂಟ್ ನಿರ್ಮಾಣ ಕಾಮಗಾರಿ ಪ್ರಗತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಅದಷ್ಟು ಶೀಘ್ರದಲ್ಲಿ ಜಿಲ್ಲೆಗೆ ಮಂಜೂರಾ ಗಿರುವ ಎಲ್ಲಾ ಪ್ಲಾಂಟ್‌ಗಳ ಕಾಮಗಾರಿ ಮುಕ್ತಾಯಗೊಂಡು ಕಾರ್ಯ ನಿರ್ವ ಹಿಸುವ ಕುರಿತು ಸಂಬಂಧಪಟ್ಟ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ರುವಂತೆ ತಿಳಿಸಿದರು.

ಮಕ್ಕಳ ವಾರ್ಡ್‌ಗಳ ನಿರ್ಮಾಣ ಕುರಿತಂತೆ ಎಲ್ಲಾ ನಿರ್ಮಾಣ ಕಾಮಗಾರಿ ಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿ. ಸರಕಾರ ಮತ್ತು ವಿವಿಧ ದಾನಿಗಳು ನೀಡಿರುವ ವೈದ್ಯಕೀಯ ಉಪಕರಣಗಳನ್ನು ವಾರ್ಡ್‌ಗಳಲ್ಲಿ ಅಳವಡಿಸಿ. ನಗರ ಪ್ರದೇಶದಲ್ಲಿ ಪಾಸಿಟಿವ್ ಬಂದ ವ್ಯಕ್ತಿಯು ವಾಸಿಸುವ 100 ಮೀ. ಪ್ರದೇಶ ದಲ್ಲಿ ಹಾಗೂ ಗ್ರಾಮೀಣ ಪ್ರದೇಶದ 200 ಮೀ. ವ್ಯಾಪ್ತಿಯಲ್ಲಿ ವ್ಯಾಪಕ ಟೆಸ್ಟಿಂಗ್‌ಗಳನ್ನು ನಡೆಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಉದ್ಯೋಗಿಗಳು ಪಾಸಿಟಿವ್ ಬಂದಲ್ಲಿ ಅವರೊಂದಿಗೆ ಕಾರ್ಯ ನಿರ್ವಹಿಸುವ ಎಲ್ಲಾ ಸಹದ್ಯೋಗಿಗಳನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು.

ಜಿಲ್ಲೆಗೆ ಕೇರಳ ಸಮೀಪದ್ದಲ್ಲಿದ್ದು, ಅಲ್ಲಿಂದ ವಿವಿಧ ಕಾರಣಗಳಿಗೆ ಸಾರ್ವಜನಿ ಕರು ಆಗಮಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಯಲ್ಲಿ ಕಡಿಮೆಯಾಗುತ್ತಿಲ್ಲ. ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ಹೊರರಾಜ್ಯದ ವಿದ್ಯಾರ್ಥಿಗಳನ್ನು 7 ದಿನಗಳ ಐಸೊಲೇಶನ್‌ಗೆ ಒಳಪಡಿಸಿ, 7 ನೇ ದಿನ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿ ಎಂದು ಡಿಸಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಹೆಚ್‌ಓ ಡಾ. ನಾಗ ಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಹಾಗೂ ತಜ್ಞ ಸಮಿತಿಯ ವೈದ್ಯರು ಹಾಗೂ ವಿವಿಧ ಇಲಾಖಾಧಿಕಾರಿ ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News