ಮಣಿಪಾಲ ಕೆಎಂಸಿಯಲ್ಲಿ ಕರಾವಳಿ ಮೊದಲ ಸ್ಕಿನ್ ಬ್ಯಾಂಕ್ ಉದ್ಘಾಟನೆ

Update: 2021-08-21 16:04 GMT

ಉಡುಪಿ, ಆ.21: ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊಟ್ಟಮೊದಲ ಸ್ಕಿನ್‌ಬ್ಯಾಂಕ್ (ಚರ್ಮ ನಿಧಿ)ಯನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ.ರಂಜ್ ಆರ್. ಪೈ ಶನಿವಾರ ಉದ್ಘಾಟಿಸಿದರು.

ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಣಿಪಾಲ ಅಕಾಡೆಮಿಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಸಹಭಾಗಿತ್ವದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಟರಿ-ಮಾಹೆ ಸ್ಕಿನ್ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ರೋಟರಿ ಕ್ಲಬ್ ಮಣಿಪಾಲ್ ಟೌನ್ ಉಪಕರಣಗಳನ್ನು ಖರೀದಿಸಲು ರೋಟರಿ ಫೌಂಡೇಶನ್ ಜಾಗತಿಕ ಅನುದಾನ ಕಾರ್ಯಕ್ರಮದಡಿ 83 ಲಕ್ಷ ರೂ. ಗಳೊಂದಿಗೆ ಮಾಹೆ ಅಗತ್ಯ ಮೂಲಸೌಕರ್ಯಗಳಿಗೆ 50 ಲಕ್ಷ ರೂ. ನೀಡಿತ್ತು.

ಸ್ಕಿನ್ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಡಾ.ರಂಜನ್ ಪೈ, ಸ್ಕಿನ್ ಬ್ಯಾಂಕ್ ನಿಂದ ಈ ಪ್ರದೇಶದ ಸುಟ್ಟಗಾಯಗಳ ಸಂತ್ರಸ್ತರಿಗೆ, ವಿಶೇಷವಾಗಿ ಹಿಂದುಳಿದ ಜನರಿಗೆ ಸಹಾಯವಾಗಲಿದೆ. ಸ್ಕಿನ್ ಬ್ಯಾಂಕ್‌ನಲ್ಲಿ ಸುಲಭವಾಗಿ ಲಭ್ಯವಿರುವ ಚರ್ಮವನ್ನು ಬಳಸಿಕೊಂಡು ಸ್ಕಿನ್ ಗ್ರಾಫ್ಟಿಂಗ್ ಮಾಡುವ ಮೂಲಕ ರೋಗಿ ಗಳಿಗೆ ಉತ್ತಮ ಆರೈಕೆ ಸಿಗಲಿದೆ. ಮತ್ತು ಅವರ ಜೀವನದ ಗುಣಮಟ್ಟ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ ಎಂದರು.

ಮಣಿಪಾಲ ಕೆಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಎನ್.ಸಿ.ಶ್ರೀಕುಮಾರ್ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕಿನ ಅಗತ್ಯತೆ ಮತ್ತು ಉಪಯುಕ್ತತೆಯನ್ನು ವಿವರಿಸಿ ಮಾತನಾಡಿ, ದೊಡ್ಡ ಸುಟ್ಟ ಗಾಯಗಳ ಸಂದರ್ಭಗಳಲ್ಲಿ, ಅಂದರೆ, ಶೇ.30-40ಕ್ಕಿಂತ ಹೆಚ್ಚು ಗಾಯ ಗೊಂಡರೆ, ರೋಗಿಗಳು ತಮ್ಮ ಚರ್ಮವನ್ನು ಬಳಸಿಕೊಳ್ಳಲು ಆಗುವುದಿಲ್ಲ. ಹಲವಾರು ದುಬಾರಿ ದರದ ಬದಲಿ ಚರ್ಮಗಳು ಮಾರುಕಟ್ಟೆಯಲ್ಲಿ ಲಭ್ಯ ವಿದ್ದರೂ, ಮೃತ ಮಾನವರ ಚರ್ಮವು ಅತ್ಯುತ್ತಮ ಬದಲಿ ಚರ್ಮವಾಗಿದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈಗ ಸ್ಕಿನ್ ಬ್ಯಾಂಕ್ ಆರಂಭವಾಗುತ್ತಿರುವುದರಿಂದ, ಸುಟ್ಟ ಗಾಯದ ರೋಗಿಗಳು ಭಾರತದ ಇತರ ಭಾಗಗಳಿಂದ ಚರ್ಮವನ್ನು ಪಡೆಯಲು ನಿರ್ಣಾಯಕ 2-3 ದಿನಗಳವರೆಗೆ ಕಾಯಬೇಕಾಗಿಲ್ಲ. ನೋವನ್ನು ಕಡಿಮೆ ಮಾಡಬಹುದು ಜೊತೆಗೆ ಜೀವ ಉಳಿಸಬಹುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲಾ 3182ರ ಗವರ್ನರ್ ಎಂಜಿ ರಾಮಚಂದ್ರ ಮೂರ್ತಿ ಮಾತನಾಡಿದರು. ರಾಮಚಂದ್ರ ಮೂರ್ತಿ ಅವರು, ರೋಟರಿ ಕ್ಲಬ್‌ನ ಸದಾನಂದ ಚಾತ್ರ, ರಾಜಾರಾಮ್ ಭಟ್ ಹಾಗೂ ಗಣೇಶ್ ನಾಯಕ್ ಅವರೊಂದಿಗೆ ಸ್ಕಿನ್‌ಬ್ಯಾಂಕ್ ಉಪಕರಣಗಳನ್ನು ಮಾಹೆಗೆ ಹಸ್ತಾಂತರಿ ಸಿದರು. ಮಾಹೆ ಪರವಾಗಿ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಪಕುಲಪತಿ ಲೆ.ಜ. (ಡಾ) ಎಂ ಡಿ ವೆಂಕಟೇಶ್ ಮತ್ತು ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಸ್ವೀಕರಿಸಿದರು.

ಮುಂಬೈಯ ನೇಷನಲ್ ಬನ್ಸರ್ ಸೆಂಟರ್ ಮತ್ತು ಸ್ಕಿನ್ ಬ್ಯಾಂಕಿನ ನಿರ್ದೇಶಕರಾದಡಾ.ಸುನಿಲ್ ಕೇಶ್ವಾನಿ, ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಮಾತನಾ ಡಿದರು. ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಅಡಿಯಲ್ಲಿ 18 ಹಾಸಿಗೆಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಸುಟ್ಟಗಾಯ ಘಟಕವನ್ನು ಹೊಂದಿದ್ದೇವೆ.ಇದಕ್ಕೆ ಪೂರಕವಾಗಿ ಸ್ಕಿನ್ ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದರು.

ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಗಣೇಶ್ ನಾಯಕ್ ಸ್ವಾಗತಿಸಿ, ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಡಾ.ರವಿರಾಜ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ರೋಟರಿ-ಮಾಹೆ ಸ್ಕಿನ್ ಬ್ಯಾಂಕ್ ಸಹಾಯವಾಣಿ: 09686676564

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News