ಭೀಕರ ಪ್ರವಾಹಕ್ಕೆ ಬಿಹಾರ ತತ್ತರ
ಪಾಟ್ನಾ : ಬಿಹಾರದ ಹಾಜಿಪುರ ಹಾಗೂ ಸರನ್ ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ವ್ಯಾಪಕ ಹಾನಿ ಉಂಟಾಗಿದೆ. ಪ್ರವಾಹದಿಂದಾಗಿ ಹಲವೆಡೆ ಮನೆಗಳು ಕುಸಿದಿದ್ದರೆ, ಹಲವು ಕಡೆಗಳಲ್ಲಿ ಕೃಷಿಭೂಮಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಹಾಜಿಪುರ ಜಿಲ್ಲೆಯ ಜನತೆ ತಮ್ಮ ಜಾನುವಾರು ಹಾಗೂ ಸಾಮಾನು ಸರಂಜಾಮುಗಳೊಂದಿಗೆ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದು, ಕೃಷಿಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಸರನ್ ಜಿಲ್ಲೆಯ ರೈತರು ದೊಡ್ಡ ಪ್ರಮಾಣದ ನಷ್ಟಕ್ಕೀಡಾಗಿದ್ದಾರೆ.
"ಪ್ರವಾಹ ನೀರು ನುಗ್ಗಿರುವ ಕಾರಣ ಮನೆಯನ್ನು ತೊರೆಯಲೇಬೇಕಾಗಿದೆ. ಕುಟುಂಬ ಮಕ್ಕಳು, ಜಾನುವಾರುಗಳೊಂದಿಗೆ ಅಲ್ಲಿಂದ ಹೊರಬಂದಿದ್ದೇವೆ. ಆದರೆ ಜೀವನ ಕಠಿಣವಾಗಿದೆ. ಕೆಲವೊಮ್ಮೆ ಆಹಾರ ಸಿಗುತ್ತಿದೆ. ಹಲವು ಬಾರಿ ಉಪವಾಸ ಉಳಿಯಬೇಕಾಗಿದೆ" ಎಂದು ಹಾಜಿಪುರದ ಇಂದೂದೇವಿ ಪರಿಸ್ಥಿತಿಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
"ಗಂಗಾನದಿಯ ಪ್ರವಾಹದ ನೀರು ನಮ್ಮ ಮನೆಗಳಿಗೆ ನುಗ್ಗಿ ಸೊಂಟದ ಮಟ್ಟಕ್ಕೆ ನೀರು ನಿಂತಿದೆ. ಆದ್ದರಿಂದ ನಾವು ಕುಟುಂಬ ಹಾಗೂ ಜಾನುವಾರುಗಳೊಂದಿಗೆ ಎತ್ತರದ ಪ್ರದೇಶಕ್ಕೆ ಬಂದಿದ್ದೇವೆ. 12 ಗಂಟೆಯಿಂದ 2 ಗಂಟೆವರೆಗೆ ಸರ್ಕಾರ ಆಹಾರ ವಿತರಿಸುತ್ತಿದೆ. ಆದರೆ ಜಾನುವಾರುಗಳಿಗೆ ತಿನಸು ಇಲ್ಲದೇ ಸಮಸ್ಯೆ ಎದುರಾಗಿದೆ" ಎಂದು ಪ್ರವಾಹ ಸಂತ್ರಸ್ತರೊಬ್ಬರು ಹೇಳಿದ್ದಾರೆ.
ಧಾರಾಕಾರ ಮಹಿಳೆಯಿಂದಾಗಿ ಬಿಹಾರದ 26 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.