×
Ad

ಅಫ್ಘಾನ್ ಬೆಳವಣಿಗೆ ಬಗ್ಗೆ ಬಂಗಾಳದ ಈ ಪುಟ್ಟ ಪಟ್ಟಣಕ್ಕೇಕೆ ಕಳವಳ ಗೊತ್ತೇ ?

Update: 2021-08-22 10:22 IST
ಫೋಟೊ : PTI

ಸೋನಮುಖಿ/ ಕೊಲ್ಕತ್ತಾ: ಅಪ್ಘಾನಿಸ್ತಾನದ ರಾಜಧಾನಿ ಕಾಬೂಲಿನಿಂದ 3000 ಕಿಲೋಮೀಟರ್ ದೂರದಲ್ಲಿರುವ ಬಂಗಾಳದ ಸೋನಮುಖಿ ಪಟ್ಟಣದ ಜನ ಅಪ್ಘಾನ್ ಬೆಳವಣಿಗೆಗಳನ್ನು ಕುತೂಹಲ- ಆತಂಕದಿಂದ ವೀಕ್ಷಿಸುತ್ತಿದ್ದಾರೆ. ಕಾರಣ ಇಷ್ಟೇ; ಬಂಕುರು ಜಿಲ್ಲೆಯ ಈ ಪಟ್ಟಣ ಅಫ್ಘಾನಿಸ್ತಾನದ ಜತೆ ನಿಕಟವಾದ ವ್ಯಾಪಾರ ಸಂಪರ್ಕ ಹೊಂದಿದೆ.

ಕಾಬೂಲ್ ಜನರಿಗೆ ಅತ್ಯುತ್ತಮ ಗುಣಮಟ್ಟದ ರೇಷ್ಮೆ ರುಮಾಲುಗಳು ಪೂರೈಕೆಯಾಗುವುದು ಇಲ್ಲಿಂದ. ಅಫ್ಘಾನ್ ಆಡಳಿತ ತಾಲಿಬಾನ್ ತೆಕ್ಕೆಗೆ ಬಂದ ಬಳಿಕ ಭಾರತದ ಜತೆಗಿನ ವ್ಯಾಪಾರ ಸಂಬಂಧ ಸ್ಥಗಿತಗೊಂಡಿದ್ದು, ರುಮಾಲ್ ನೇಯುವ ನೇಕಾರರು ಮತ್ತು ಮಾರಾಟಗಾರರು ವ್ಯವಹಾರ ನಷ್ಟದಿಂದ ಕಂಗೆಟ್ಟಿದ್ದಾರೆ. ಪರ್ಯಾಯವಾಗಿ ಬಲೂಚಾರಿ ಸೀರೆಗಳ ನೆಯ್ಗೆಗೆ ಮೊರೆ ಹೋಗಿದ್ದಾರೆ.

"ಮೂರು ತಲೆಮಾರುಗಳಿಂದ ನಾವು ಈ ವ್ಯವಹಾರದಲ್ಲಿದ್ದೆವು. ಕಳೆದ ವರ್ಷದ ವರೆಗೆ ರುಮಾಲುಗಳ ಮಾರಾಟದಿಂದ ವಾರ್ಷಿಕ ಒಂದು ಕೋಟಿ ರೂಪಾಯಿವರೆಗೆ ಆದಾಯ ಬರುತ್ತಿತ್ತು. ಆದರೆ ಇದೀಗ ದಿಢೀರನೇ ನಿಂತಿದೆ" ಎಂದು ಶ್ಯಾಮಪಾದ ದತ್ತಾ (49) ಹೇಳುತ್ತಾರೆ. ಕೊಲ್ಕತ್ತಾದ ರಬೀಂದ್ರ ಸರಣಿ ಮತ್ತು ಸೋನಮುಖಿಯಲ್ಲಿ ಇವರು ಮಗ್ಗವನ್ನು ಹೊಂದಿದ್ದಾರೆ.

ಸೋನಮುಖಿ ಮತ್ತು ಅಫ್ಘಾನಿಸ್ತಾನದ ನಡುವಿನ ಸಂಬಂಧ ಸುಮಾರು 60 ವರ್ಷದಷ್ಟು ಹಳೆಯದು. ಬಂಗಾಳದ ಗ್ರಾಮಗಳಲ್ಲಿ ಒಣಹಣ್ಣುಗಳು ಮತ್ತು ಸಾಂಬಾರ ಪದಾರ್ಥಗಳನ್ನು ಮಾರಾಟ ಮಾಡುವ ವೇಳೆ ರೇಷ್ಮೆ ನೆಯ್ಗೆಗೆ ಹೆಸರಾದ ಈ ಗ್ರಾಮ ಕಾಬೂಲಿವಾಲರ ಕಣ್ಣಿಗೆ ಬಿತ್ತು. "ಅವರು ಮೊದಲ ಬಾರಿಗೆ ರೇಷ್ಮೆ ರುಮಾಲುಗಳಿಗೆ ಕಾರ್ಯಾದೇಶ ನೀಡಿದರು ಮತ್ತು ಇದನ್ನು ಬಹಳಷ್ಟು ಇಷ್ಟಪಟ್ಟರು. ಮತ್ತೆ ಮತ್ತೆ ಇದಕ್ಕೆ ಬೇಡಿಕೆ ಬಂದು, ವ್ಯಾಪಾರ ಸಂಬಂಧ ಆರಂಭವಾಯಿತು" ಎಂದು ನೇಕಾರ ಬರನ್ ಶಾಹೂ ಹೇಳುತ್ತಾರೆ.

1990ರ ವೇಳೆಗೆ ಗ್ರಾಮದ ಸುಮಾರು 500 ಕುಟುಂಬಗಳು ರುಮಾಲು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದವು. ಆದರೆ ಡಿಜಿಟಲ್ ಪ್ರಿಂಟಿಂಗ್ ಮತ್ತು ದೊಡ್ಡ ಪ್ರಮಾಣದಲ್ಲಿ ಅಫ್ಘಾನರು ರುಮಾಲುಗಳನ್ನು ತ್ಯಜಿಸಿರುವ ಕಾರಣದಿಂದ ಈ ಸಂಖ್ಯೆ ಇದೀಗ 50ಕ್ಕೆ ಇಳಿದಿದೆ. ರುಮಾಲುಗಳ ಬೆಲೆ ಬಳಸಿದ ರೇಷ್ಮೆಯ ಗುಣಮಟ್ಟಕ್ಕೆ ಅನುಸಾರವಾಗಿ 350 ರಿಂದ 3500 ರೂಪಾಯಿಗಳವರೆಗೆ ಇದೆ ಎಂದು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News