ಕುಂದಾಪುರ: ಪರಿಶಿಷ್ಟ ಜಾತಿ- ಪಂಗಡಗಳ ಕುಂದುಕೊರತೆ ಸಭೆ

Update: 2021-08-22 15:14 GMT

ಕುಂದಾಪುರ ಆ.22: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆ ಸಭೆಯು ಕುಂದಾಪುರ ಠಾಣೆ ಉಪನಿರೀಕ್ಷಕ ಸದಾಶಿವ ಗವರೋಜಿ ಅಧ್ಯಕ್ಷತೆಯಲ್ಲಿ ಕುಂದಾಪುರ ರಕ್ತೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ರವಿವಾರ ಜರಗಿತು.

ಈ ಸಂದರ್ಭದಲ್ಲಿ ದಲಿತ ಮುಖಂಡ ಚಂದ್ರಮ ತಲ್ಲೂರು ಮಾತನಾಡಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಈ ರೀತಿಯ ಕುಂದು ಕೊರತೆ ಸಭೆಯನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕರೆಯಬೇಕು. ಇದರಿಂದ ಸಮಾಜದ ಜಿಲ್ಲಾ ಮಟ್ಟದ ಸಮಸ್ಯೆಗಳ ಬಗ್ಗೆ ನೇರವಾಗಿ ಚರ್ಚಿಸಲು ಆಗುತ್ತಿತ್ತು. ಕೋವಿಡ್ ಹೆಸರಿನಲ್ಲಿ ಈ ಸಭೆಯನ್ನೇ ರದ್ದು ಪಡಿಸಲಾಗಿದೆ. ಆದರೆ ಈ ಸಮಯದಲ್ಲೂ ರಾಜಕೀಯ, ಅಧಿಕಾರಿಗಳ, ಇನ್ನಿತರ ಸಭೆಗಳು ನಡೆಯುತ್ತಲೇ ಇವೆ ಎಂದು ಹೇಳಿದರು.

ದಲಿತ ದೌರ್ಜನ್ಯ ಪ್ರಕರಣ ದಾಖಲಾದಾಗ ಜಿಲ್ಲಾಧಿಕಾರಿ ಹಾಗೂ ಎಪಿ ಸಂತ್ರಸ್ತರ ಮನೆಗೆ ಭೇಟಿ ನೀಡಬೇಕೆಂಬ ಕಾನೂನು ಇದೆ. ಆದರೆ ಇಲ್ಲಿ ಯಾವುದೇ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಕಂದಾಯ ಇಲಾಖೆಯಿಂದ ದಲಿತರ ಭೂಮಿ ವಿಚಾರವಾಗಿ ಬಹಳಷ್ಟು ಸಮಸ್ಯೆಗಳಿರುವುದರಿಂದ ಈ ಬಗ್ಗೆ ಚರ್ಚಿಸಲು ಕೂಡಲೇ ಜಿಲ್ಲಾ ಮಟ್ಟದ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದರು.

ತೌಕ್ತೆ ಚಂಡಮಾರುತದಿಂದ ಉಪ್ಪಿನಕುದ್ರುನಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮನೆಯು ಸಂಪೂರ್ಣ ಹಾಳಾಗಿದ್ದು, ಸ್ಥಳೀಯ ಪಂಚಾಯತ್ ಗ್ರಾಮಲೆಕ್ಕಿಗರು ಭಾಗಶಃ ಹಾನಿಯಾಗಿದೆ ಎಂದು ವರದಿ ಕೊಟ್ಟಿದ್ದಾರೆ. ಇದರಿಂದಾಗಿ ಅವರಿಗೆ ಸರಕಾರದಿಂದ ಸರಿಯಾದ ಪರಿಹಾರ ಸಿಗಲಿಲ್ಲ. ಇದು ಎಸ್ಸಿ/ಎಸ್ಟಿ ಸ್ಪೆಷಲ್ ಕೇಸ್ ಆದ್ದರಿಂದ ತಹಸೀಲ್ದಾರ್ ಹಾಗೂ ಇಂಜಿನಿಯರ್ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಸಂಪೂರ್ಣ ಹಾಳಾಗಿದ್ದ ಮನೆಗೆ ಪೂರ್ಣ ಪ್ರಮಾಣ ಪರಿಹಾರ ನೀಡಬೇಕೆಂದು ಸಭೆಯಲ್ಲಿ ಆಗ್ರಹ ಕೇಳಿ ಬಂತು.

ಪುರಸಭೆ ಸದಸ್ಯ ಪ್ರಭಾಕರ್ ಮಾತನಾಡಿ, ಕೊಲ್ಲೂರಿನ ಕೆರಾಡಿ ಗ್ರಾಮದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು. ಪುರಸಭೆ ಹತ್ತಿರ ರಿಕ್ಷಾ ನಿಲ್ದಾಣ ದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರಿಕ್ಷಾ ಚಾಲಕರಿಗೆ ಇತರ ರಿಕ್ಷಾ ಚಾಲಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಯಿತು.

ಸಭೆಯಲ್ಲಿ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಸುದರ್ಶನ್, ದಲಿತ ಮುಖಂಡರಾದ ಬೆಟ್ಟಿನಮನೆ ರಾಜು, ಸುಖಾನಂದ ತಲ್ಲೂರು, ಗೋಪಾಲ್, ರಾಜೇಶ್ ಕುಂದಾಪುರ, ವಿಜಯ್ ಕೆ.ಎಸ್., ಪ್ರಭಾಕರ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News