×
Ad

ಅಫ್ಘಾನಿಸ್ತಾನದಿಂದ ಮರಳಿ ಬಂದ 7 ಮಂದಿ ಕನ್ನಡಿಗರು

Update: 2021-08-22 21:21 IST
ಫೋಟೊ : PTI

ಮಂಗಳೂರು, ಆ.22: ಅಫ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಡಿಗರ ಪೈಕಿ 7 ಮಂದಿಯನ್ನು ರವಿವಾರ ಭಾರತಕ್ಕೆ ಕರೆ ತರಲಾಗಿದೆ. ಆ ಪೈಕಿ ದ.ಕ.ಜಿಲ್ಲೆಯ ಐವರು ಮತ್ತು ಬೆಂಗಳೂರು ಹಾಗೂ ಬಳ್ಳಾರಿಯ ತಲಾ ಒಬ್ಬರು ಸೇರಿದ್ದಾರೆ.

ಬಜ್ಪೆಯ ದಿನೇಶ್ ರೈ, ಬಿಜೈನ ಶ್ರವಣ್ ಅಂಚನ್, ಉಳ್ಳಾಲದ ಪ್ರಸಾದ್ ಆನಂದ್ ಮೂಡುಬಿದಿರೆಯ ಜಗದೀಶ್ ಪೂಜಾರಿ, ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್ ಡಿಸೋಜ ಎಂಬವರು  ತವರೂರಿಗೆ ಮರಳಿದ್ದು, ಸೋಮವಾರ ತಮ್ಮ ಮನೆಗಳಿಗೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಮಾರತಹಳ್ಳಿಯ ಹಿರಕ್ ದೇಬ್‌ನಾಥ್ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರಿನ ತನ್‌ವೀನ್ ಬೆಳ್ಳಾರಿ ಅಬ್ದುಲ್ ಎಂಬವರು ಕೂಡ  ಭಾರತಕ್ಕೆ ಮರಳಿದ ಕನ್ನಡಿಗರಲ್ಲಿ ಸೇರಿದ್ದಾರೆ. ಭಾರತೀಯ ವಾಯುಪಡೆಯ ವಿಮಾನ ಹಾಗೂ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ 7 ಮಂದಿಯೂ ರವಿವಾರ ಹೊಸದಿಲ್ಲಿಯ ಘಾಝಿಯಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಅಲ್ಲಿಂದ ಅವರವರ ಊರಿಗೆ ಮರಳಿದ್ದಾರೆ.

ಜೆಸ್ವಿಟ್ ಧರ್ಮ ಗುರುಗಳಾದ ಮಂಗಳೂರಿನ ವಂ.ಜೆರೋಮ್ ಸಿಕ್ವೇರಾ ಮತ್ತು ಚಿಕ್ಕಮಗಳೂರು ಎನ್.ಆರ್. ಪುರದ ವಂ. ರಾಬರ್ಟ್ ಕ್ಲೈವ್ ಹಾಗೂ ಮಂಗಳೂರಿನ ಸಿಸ್ಟರ್ಸ್‌ ಆಫ್ ಚಾರಿಟಿಯ ಧರ್ಮ ಭಗಿನಿ ಕಾಸರಗೋಡಿನ ಬೇಳ ಮೂಲದ ಭ. ತೆರೆಸಾ ಕ್ರಾಸ್ತಾ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದಾರೆ.

ಭ. ತೆರೆಸಾ ಇಟೆಲಿಗೆ ಹೋಗುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅವರು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News