×
Ad

ಭಟ್ಕಳ: ಕೋವಿಡ್ ನಿಯಮಪಾಲನೆಯೊಂದಿಗೆ ಗಣೇಶೋತ್ಸವ ಆಚರಣೆಗೆ ಸಹಾಯಕ ಆಯುಕ್ತೆ ಮಮತಾದೇವಿ ಕರೆ

Update: 2021-08-23 23:50 IST

ಭಟ್ಕಳ: ಈ ಬಾರಿಯ ಗಣೇಶೋತ್ಸವವನ್ನು ಕೋವಿಡ್ ನಿಯಮದಂತೆ ಆಚರಿಸುವಂತೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾದೇವಿ ಕರೆ ನೀಡಿದರು. 

ಅವರು ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈ ಸಲ ಸರಕಾರದ ಕೋವಿಡ್ ಮಾರ್ಗಸೂಚಿಯಂತೆ  ಗಣೇಶೋತ್ಸವವನ್ನು ದೇವಸ್ಥಾನ, ಗಣೇಶ ಮಂದಿರ ಹೊರತುಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಶಾಮಿಯಾನ, ಚಪ್ಪರ ಮುಂತಾದವುಗಳನ್ನು ಹಾಕಿ ಆಚರಿಸಲು ಅವಕಾಶವಿಲ್ಲ. ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕಿದ್ದು, ಸಮಿತಿಯವರು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು. ಗಣೇಶನ ಮೂರ್ತಿಯನ್ನು ಹತ್ತಿರದ ಸ್ಥಳದಲ್ಲೆ ವಿಸರ್ಜಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಸಿಪಿಐ ದಿವಾಕರ ಮಾತನಾಡಿ, ಗಣೇಶೋತ್ಸವವನ್ನು ಕೋವಿಡ್ ನಿಯಮದಂತೆ ಸರಳವಾಗಿ ಆಚರಿಸಲು ಸಮಿತಿ ಮುಂದಾಗಬೇಕು. ಪ್ರತಿಯೊಬ್ಬರೂ ಸರಕಾರದ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಹೇಳಿದರು.

ಮುರ್ಡೇಶ್ವರದ ಕೃಷ್ಣಾ ನಾಯ್ಕ ಮಾತನಾಡಿ, ಗಣೇಶೋತ್ಸವದ ಆಚರಣೆಗೆ ತೊಂದರೆ ಕೊಡುವುದು ಸರಿಯಲ್ಲ. ಹಬ್ಬವನ್ನು  ಹಿಂದೆ ಯಾವ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆಯೋ ಅದೇ ರೀತಿಯಾಗಿ ನಡೆಸಲು ಅವಕಾಶ ಮಾಡಿಕೊಡಬೇಕು. ಬೇರೆ ಬೇರೆ ಕಾರ್ಯಕ್ರಮಗಳಿಗೆ ನಿರ್ಬಂಧ ಇಲ್ಲದಿರುವುದು ಗಣೇಶೋತ್ಸವಕ್ಕೆ ಮಾತ್ರ ಕಟ್ಟುನಿಟ್ಟಾಗಿ ಮಾಡುತ್ತಿರುವುದು ಸರಿಯಲ್ಲ. ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸ ಮತ್ತು ಮಹತ್ವ ಇರುವುದರಿಂದ ಸರಕಾರ ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲವೆಂದರು.

ಮಣ್ಕುಳಿಯ ಸುರೇಶ ನಾಯ್ಕ ಮಾತನಾಡಿ, ಸರಕಾರದ ಮಾರ್ಗಸೂಚಿಯಲ್ಲಿ ಗಣೇಶೋತ್ಸವ ಆಚರಣೆ ಎಷ್ಟು ದಿನ ಎಂದು ನಮೂದಿಸಿಲ್ಲ. ಆಮಂತ್ರಣ ಪತ್ರಿಕೆ ಮಾಡಬೇಕಿರುವುದರಿಂದ ಶೀಘ್ರದಲ್ಲಿ ಸ್ಪಷ್ಟ ಮಾರ್ಗಸೂಚಿಯ ಬಗ್ಗೆ ತಿಳಿಸಬೇಕೆಂದರು.

ಆಟೋ ಯೂನಿಯನ್ ಅಧ್ಯಕ್ಷ ಕೃಷ್ಣಾ ನಾಯ್ಕ, ವಿಶ್ವಹಿಂದೂಪರಿಷತ್‍ನ ಶಂಕರ ಶೆಟ್ಟಿ, ಬೈಲೂರಿನ ಮಂಜುನಾಥ ನಾಯ್ಕ ಮಾತನಾಡಿದರು. ಸಹಾಯಕ ಆಯುಕ್ತೆ ಮಮತಾದೇವಿ, ಎರಡು ದಿನಗಳೊಳಗಾಗಿ ಸ್ಥಳೀಯವಾಗಿ ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು. 

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶೀಮಜಿ, ಮುಖ್ಯಾಧಿಕಾರಿ ರಾಧಿಕಾ, ಪಿಎಸೈಗಳಾದ ಭರತ್, ಕುಡಕುಂಟಿ, ಜಗದೀಶ ಜೈನ್, ಸುರೇಂದ್ರ ಭಟ್ಕಳ, ದಿನೇಶ ನಾಯ್ಕ ಮುಂಡಳ್ಳಿ, ಗಣಪಯ್ಯ ಗೊಂಡ ಕಿತ್ರೆ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳ ಗಣೇಶೋತ್ಸವ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News