×
Ad

ವೈದ್ಯಕೀಯ ನೆರವು ಒದಗಿಸಲು ಅಡ್ಡಿ: ವಿಶ್ವ ಆರೋಗ್ಯ ಸಂಸ್ಥೆ

Update: 2021-08-24 00:05 IST

ಕಾಬೂಲ್ ವಿಮಾನನಿಲ್ದಾಣದಲ್ಲಿ ಉಂಟಾಗಿರುವ ಅವ್ಯವಸ್ಥೆ ಮತ್ತು ಅಲ್ಲಿ ವಿಧಿಸಲಾಗಿರುವ ನಿರ್ಬಂಧದಿಂದಾಗಿ ಅಫ್ಗಾನ್ಗೆ ಪೂರೈಸಬೇಕಾಗಿದ್ದ ವೈದ್ಯಕೀಯ ಉಪಕರಣ, ಪೌಷ್ಟಿಕ ಆಹಾರದ ಕಿಟ್ ಸಹಿತ 500 ಟನ್ ಳೂ ಅಧಿಕ ವೈದ್ಯಕೀಯ ನೆರವಿಗೆ ಅಡ್ಡಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ. ಅಫ್ಗಾನ್ ನಲ್ಲಿ ಕಳೆದ 2 ತಿಂಗಳಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. 

ದೇಶದ ಜನಸಂಖ್ಯೆಯ ಅರ್ಧಾಂಶ ಅಂದರೆ ಸುಮಾರು 18.5 ಮಿಲಿಯನ್ ಜನತೆ ಈಗ ಇತರರ ನೆರವು ಹಾಗೂ ಮಾನವೀಯ ಉಪಕ್ರಮಗಳ ನಿರೀಕ್ಷೆಯಲ್ಲಿದ್ದಾರೆ. ಈಗ ಅಲ್ಲಿಂದ ತೆರವುಗೊಳಿಸಬೇಕಿರುವ ಜನರ ಬಗ್ಗೆ ವಿಶ್ವದ ಗಮನ ಕೇಂದ್ರೀಕೃತವಾಗಿದೆ. ಆದರೆ ನಮ್ಮ ಗಮನ ಸ್ಥಳಾಂತರಿಸಬೇಕಿರುವ ಜನರ ಪಟ್ಟಿಯಲ್ಲಿ ಸೇರಿರದ ಜನತೆಯ ಮೇಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಇನಾಸ್ ಹಮಾನ್ ರವಾನಿಸಿರುವ ಇ-ಮೇಲ್ನಲ್ಲಿ ಹೇಳಿರುವುದಾಗಿ ‘ರಾಯ್ಟರ್ಸ್’ ವರದಿ ಮಾಡಿದೆ.

ಅಫ್ಗಾನ್ ನಿಂದ ಜನರನ್ನು ಸ್ಥಳಾಂತರಿಸಲು ತೆರಳುವ ವಿಮಾನಗಳು ದುಬೈಯಲ್ಲಿರುವ ವಿಶ್ವಸಂಸ್ಥೆಯ ಗೋದಾಮಿನಿಂದ ಈ ವೈದ್ಯಕೀಯ ನೆರವನ್ನು ಕೊಂಡೊಯ್ಯಬೇಕೆಂದು ಅವರು ಮನವಿ ಮಾಡಿದ್ದಾರೆ. ಅಫ್ಗಾನ್ನಲ್ಲಿರುವ ಸುಮಾರು 10 ಮಿಲಿಯ ಮಕ್ಕಳಿಗೆ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಕ್ಕಳನಿಧಿ ಯುನಿಸೆಫ್ನ ಕಾರ್ಯನಿರ್ವಹಣಾಧಿಕಾರಿ ಹೆನ್ರಿಟಾ ಫೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News