ಅಫ್ಘಾನ್ ನೆರೆರಾಷ್ಟ್ರಗಳು ನಿರಾಶ್ರಿತರಿಗೆ ಗಡಿ ಮುಕ್ತವಾಗಿಸಬೇಕು: ಯುಎನ್‌ಎಚ್‌ಸಿಆರ್ ಕರೆ

Update: 2021-08-24 05:22 GMT
ಫೈಲ್ ಫೋಟೊ (source: PTI)

ವಿಶ್ವಸಂಸ್ಥೆ, ಆ.24: ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ತಾಲಿಬಾನ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪಲಾಯನ ಮಾಡುವ ಸಾಧ್ಯತೆ ಇರುವುದರಿಂದ ನೆರೆ ರಾಷ್ಟ್ರಗಳು ನಿರಾಶ್ರಿತರನ್ನು ಸ್ವೀಕರಿಸಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಕರೆ ನೀಡಿದ್ದಾರೆ.

"ಈ ಹಂತದಲ್ಲಿ, ನಮ್ಮ ಪ್ರಾಥಮಿಕ ಕಳಕಳಿ ಎಂದರೆ ಸುರಕ್ಷತೆಯನ್ನು ಬಯಸಿ ಗಡಿಯಾಚೆಗೆ ಅಥವಾ ನೆರೆಯ ದೇಶಕ್ಕೆ ಹೊರಟಿರುವ ಅಫ್ಘಾನಿಗಳು. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೆರೆಯ ದೇಶಗಳು ಇಲ್ಲಿನ ನಿರಾಶ್ರಿತರಿಗಾಗಿ ಗಡಿಯನ್ನು ಮುಕ್ತಗೊಳಿಸಬೇಕು ಎಂದು ಯುಎನ್‌ಎಚ್‌ಸಿಆರ್ ಕರೆ ನೀಡುತ್ತಿದೆ" ಎಂದು ಏಷ್ಯಾ ಮತ್ತು ಫೆಸಿಫಿಕ್ ಪ್ರದೇಶಗಳ ಪ್ರಾದೇಶಿಕ ವಕ್ತಾರೆ ಕ್ಯಾಥರೀನ್ ಸ್ಟಬ್ಬೆರ್‌ಫೀಲ್ಡ್ ಹೇಳಿಕೆ ನೀಡಿದ್ದಾರೆ ಎಂದು 'ಸ್ಪುಟ್ನಿಕ್' ವರದಿ ಮಾಡಿದೆ.

ಅಂತಾರಾಷ್ಟ್ರೀಯ ಸಮುದಾಯ ಅಫ್ಘನ್ನರ ಮತ್ತು ದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರು ಒಳಬರುವ ನೆರೆಯ ದೇಶಗಳ ನೆರವಿಗೆ ಬರಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಭಾರತ, ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಹಲವು ದೇಶಗಳು ಅಫ್ಘನ್ನರನ್ನು ಸ್ಥಳಾಂತರಿಸಲು ಪ್ರಯತ್ನ ನಡೆಸಿರುವ ಬೆನ್ನಲ್ಲೇ ಯುಎನ್‌ಎಚ್‌ಸಿಆರ್ ಈ ಹೇಳಿಕೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಈ ವರ್ಷ ಜನವರಿಂದೀಚೆಗೆ ಸ್ಥಳಾಂತರಗೊಂಡ 5.5 ಲಕ್ಷ ಮಂದಿ ಸೇರಿದಂತೆ ಒಟ್ಟು 35 ಲಕ್ಷ ಮಂದಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಕ್ಷಣೆ ಅಗತ್ಯವಿರುವ ಅಫ್ಘನ್ನರ ಸ್ಥಳಾಂತರ ಮತ್ತು ಪುನರ್ವಸತಿ ಬಗ್ಗೆ ಹಲವು ದೇಶಗಳು ಬದ್ಧತೆ ಪ್ರದರ್ಶಿಸಿರುವುದನ್ನು ಯುಎನ್‌ಎಚ್‌ಸಿಆರ್ ಸ್ವಾಗತಿಸುತ್ತದೆ. ದುರದೃಷ್ಟವಶಾತ್ ಈ ಪ್ರಯತ್ನಗಳು, ಈಗಾಗಲೇ ಸ್ಥಳಾಂತರಗೊಂಡಿರುವ ಲಕ್ಷಾಂತರ ಅಫ್ಘನ್ನರ ಪೈಕಿ ಕೆಲವರಿಗಷ್ಟೇ ನೆರವಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News