ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ : ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ
ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ವಿವಾದಾತ್ಮಕ ಹೇಳಿಕೆ ಕುರಿತು ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಮಂಗಳವಾರ ಮಧ್ಯಾಹ್ನ ರತ್ನಗಿರಿ ಜಿಲ್ಲೆಯ ಚಿಪ್ಲೂನ್ ನಲ್ಲಿ ಬಂಧಿಸಲಾಗಿದೆ ಎಂದು India Today ವರದಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರ ವಿವಾದಾತ್ಮಕ ಹೇಳಿಕೆಗಾಗಿ ಅವರ ವಿರುದ್ಧ ದಾಖಲಾಗಿರುವ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೇಳಿಕೆಯ ನಂತರ ನಾರಾಯಣ್ ರಾಣೆ ವಿರುದ್ಧ ನಾಲ್ಕು ಎಫ್ಐಆರ್ ದಾಖಲಿಸಲಾಗಿದೆ. ಪುಣೆಯಲ್ಲಿ ಒಂದು, ನಾಸಿಕ್‌ನಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ. ಎರಡು ರಾಯಗಢ ಜಿಲ್ಲೆಯ ಮಹದ್ ಪ್ರದೇಶದಲ್ಲಿ ದಾಖಲಾಗಿದೆ.
ಈ ಮಧ್ಯೆ, ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನಾರಾಯಣ್ ರಾಣೆ ಟೀಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ನಾರಾಯಣ್ ರಾಣೆ ಅವರು ಮುಖ್ಯಮಂತ್ರಿಯ ಬಗ್ಗೆ ಮಾತನಾಡುವಾಗ ಸಂಯಮವನ್ನು ತೋರಿಸಬೇಕಿತ್ತು ಎಂದಿದ್ದಾರೆ.
ನಾರಾಯಣ್ ರಾಣೆ ಅವರು ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನಾರಾಯಣ್ ರಾಣೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಬಂಧನ ಅಥವಾ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ನೀಡುವಂತೆ ಮಧ್ಯಂತರ ಆದೇಶವನ್ನು ಕೋರಿದ್ದಾರೆ. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ .ಎಸ್.ಶಿಂಧೆ ಹಾಗೂ ಎನ್ .ಜೆ. ಜಮಾದಾರ್ ಅವರ ವಿಭಾಗೀಯ ಪೀಠದ ಮುಂದೆ ಇಡಲಾಗಿದ್ದು, ಮಂಗಳವಾರವೇ ತುರ್ತು ವಿಚಾರಣೆಗೆ ಕೋರಿದೆ. ಆದಾಗ್ಯೂ, ಪೀಠವು ಅದನ್ನು ಆಲಿಸಲು ನಿರಾಕರಿಸಿತು ಮತ್ತು ಕಾರ್ಯವಿಧಾನವನ್ನು ಅನುಸರಿಸಲು ವಕೀಲರನ್ನು ಕೇಳಿತು.