ಕಾಬೂಲ್ ಮಿಲಿಟರಿ ಬೇಸ್ ನಲ್ಲಿ ಟೆಕ್ನೀಶಿಯನ್ ಆಗಿದ್ದ ಮಂಗಳೂರಿನ ವ್ಯಕ್ತಿ ಮನೆಗೆ ವಾಪಸ್
ಉಳ್ಳಾಲ: ತಾಲಿಬಾನ್ ವಶಕ್ಕೆ ಪಡೆದಿರುವ ಅಫ್ಘಾನ್ ನ ಕಾಬೂಲ್ ನಲ್ಲಿ ಮಿಲಿಟರಿ ಬೇಸ್ ನಲ್ಲಿ ಎ.ಸಿ. ಟೆಕ್ನಿಶಿಯನ್ ಆಗಿ ಉದ್ಯೋಗದಲ್ಲಿದ್ದ ಡೆಮ್ಸಿ ಮೊಂತೆರೊ ಮಂಗಳವಾರ ಉಳ್ಳಾಲ ಠಾಣಾ ವ್ಯಾಪ್ತಿಯ ಉಳಿಯ ನಿವಾಸಕ್ಕೆ ವಾಪಸ್ ಆಗಿದ್ದಾರೆ.
ಡೆಮ್ಸಿ ಅವರನ್ನ ಕಾಬೂಲಿನಿಂದ ಅಮೆರಿಕ ನ್ಯಾಟೊ ಪಡೆ ಖತರ್ ಗೆ ಏರ್ ಲಿಪ್ಟ್ ಮಾಡಿತ್ತು. ಇದರಿಂದ ಕೆಲವು ದಿನ ಕತಾರ್ ನಲ್ಲಿ ಉಳಿದಿದ್ದ ಅವರು ಸೋಮವಾರ ಖತರ್ ನಿಂದ ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ದೆಹಲಿಗೆ ತಲುಪಿದ್ದು, ಅಲ್ಲಿಂದ ಮುಂಬೈಗೆ ಬಂದ ಅವರು ಮಂಗಳವಾರ ಮಂಗಳೂರು ತಲಪಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಇವರ ಅಣ್ಣ ಮೆಲ್ವಿನ್ ಊರಿಗೆ ಮರಳಿದ್ದರು.
ಡೆಮ್ಸಿ ಮೊಂತೆರೊ ಉದ್ಯೋಗ ನಿಮಿತ್ತ ಐದು ವರ್ಷಗಳ ಹಿಂದೆ ಅಫ್ಘಾನ್ ಗೆ ತೆರಳಿದ್ದರು. ಅಫ್ಘಾನ್ ನನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಕಾಬುಲ್ ನಲ್ಲಿ ಉದ್ಯೋಗದಲ್ಲಿದ್ದ ಒಟ್ಟು 150 ಮಂದಿ ಭಾರತೀಯರನ್ನು ಖತರ್ ಗೆ ಏರ್ ಲಿಫ್ಟ್ ಮಾಡಲಾಗಿತ್ತು. ಅದರಲ್ಲಿ ನಾನು ಕೂಡಾ ಇದ್ದೆ. ಸೋಮವಾರ 150 ಭಾರತೀಯರು ಖತರ್ ನಿಂದ ಬಂದಿದ್ದಾರೆ. ಇದರಲ್ಲಿ ಐವರು ಕನ್ನಡಿಗರು. ನಾವು ಸುರಕ್ಷಿತವಾಗಿ ಮರಳಿ ತಾಯ್ನಾಡಿಗೆ ಹಿಂದಿರುಗಿ ಬರಲು ಸಾಧ್ಯ ಆಗಿದೆ ಎಂದು ಡೆಮ್ಸಿ ಮೊಂತೆರೊ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಹೊರಗಡೆ ತಾಲಿಬಾನಿಗಳ ಅಟ್ಟಹಾಸ ನಡೆಯುತ್ತಿದ್ದು ನಾವು ಮಿಲಿಟರಿ ಬೇಸ್ ನಲ್ಲಿ ಇದ್ದ ಕಾರಣ ಯಾವ ಸುದ್ದಿ ಕೂಡಾ ಗೊತ್ತಾಗುತ್ತಿರಲಿಲ್ಲ ಎಂದು ಅವರು ಹೇಳಿದರು.