ಬಿಜೆಪಿಯವರಿಂದ 'ಭೇಟಿ ಬಚಾವೋ' ಆಗಬೇಕಿದೆ: ಮಾಜಿ ಸಚಿವ ರಮಾನಾಥ ರೈ
ಬಂಟ್ವಾಳ, ಆ.25: ಬಿಜೆಪಿಯಿಂದ ಮಹಿಳೆಯರ ಮೂಲಭೂತ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗಬೇಕಾದರೆ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಬಂಟ್ಚಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆದ ಬೃಹತ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಭೇಟಿ ಬಚಾವೋ ಕಾರ್ಯಕ್ರಮ ವಿಫಲವಾಗಿದೆ. ಬಿಜೆಪಿಯ ಸಚಿವರು, ಬಲಿಷ್ಠ ಪಟ್ಟಭದ್ರರಿಂದ 'ಭೇಟಿ ಬಚಾವೋ' ಆಗಬೇಕಾಗಿದೆ ಎಂದರು.
ದುರ್ಬಲ ಜಾತ್ಯತೀತ ಪಕ್ಷಗಳಿಂದ ದೇಶದ ಜಾತ್ಯತೀತ ಸಿದ್ದಾಂತಗಳೇ ದುರ್ಬಲಗೊಂಡಿದೆ. ಧರ್ಮದ ಹೆಸರಿನಲ್ಲಿ ಹತ್ಯೆ ಪ್ರಕರಣಗಳು ನಡೆಯುತ್ತಿದ್ದು ಬಿಜೆಪಿ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇಂತಹ ನೀಚ ಕಾರ್ಯ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದೆ. ನರೇಗಾ ಯೋಜನೆಯಡಿ ದೊಡ್ಡ ಮೊತ್ತದ ಹಣ ಗ್ರಾಮಗಲಿಗೆ ಬಂದು ಗ್ರಾಮದ ಅಭಿವೃದ್ದಿಯಾಗಿದೆ. ಪಂಚಾಯತ್ ಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಇಂದಿರಾ ಗಾಂಧಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಿ ಅಂಗನವಾಡಿಗಳ ಮೂಲಕ ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಕಾರ್ಯ ಮಾಡಿದ್ದಾರೆ ಎಂದರು.
ಕೋವಿಡ್ ಬರುವ ಮೊದಲೇ ದೇಶದ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ರಫೇಲ್ ಯುದ್ಧ ವಿಮಾನ ಖರೀದಿಯ ಅವ್ಯವಹಾರದ ತನಿಖೆ ಬಿಜೆಪಿ ಸರಕಾರ ಮಾಡಿಲ್ಲ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಪಿಸಿಸಿ ಬಂಟ್ಚಾಳ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 11 ಮಂದಿ ಹಿರಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯರಾದ ಮಮತಾಗಟ್ಟಿ, ವೀಣಾ ಭಟ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಜಿಪಂ ಮಾಜಿ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ತಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್ ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಸ್ವಾಗತಿಸಿದರು. ಬಂಟ್ವಾಳ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಲ್ಮಾ ಮೊರಾಸ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
ದೇಶದಲ್ಲಿ ಬದಲಾವಣೆಗಾಗಿ ಮಹಿಳೆಯರು ಸಂಘಟಿತರಾಗಬೇಕು: ಭವ್ಯಾ ನರಸಿಂಹಮೂರ್ತಿ
ಮೋದಿ ಅಲೆ ಇದೀಗ ದೇಶದಲ್ಲಿ ಸುಳ್ಳಿನ, ಬಡತನದ, ಮೋಸದ, ನಿರುದ್ಯೋಗದ, ಅತ್ಯಾಚಾರದ ಅಲೆ ಹೆಚ್ಚಾಗಿದೆ. ಮೋದಿ ಅಲೆಯಿಂದ ದೇಶದಲ್ಲಿ ಅದೇನು ಬದಲಾವಣೆ ಆಗಲಿದೆ ಎಂದು ನಂಬಿ ಬಿಜೆಪಿಗೆ ಓಟು ಕೊಟ್ಟ ಜನತೆಗೆ ಪ್ರಸಕ್ತ ಸತ್ಯದ ಅರಿವಾಗಿದೆ. ಒಂದು ತಿಂಗಳಲ್ಲೇ ಒಂದು ಕೋಟಿ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದರ ನೇರ ಪರಿಣಾಮ ಮಹಿಳೆಯರ ಮೇಲೆ ಆಗಿದೆ. ಬ್ರಿಟಿಷರಂತೆ ವಿಭಜನೆ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ದೇಶದ ಸಂಪತ್ತನ್ನು ಬಂಡವಾಳ ಶಾಹಿಗಳಿಗೆ ಧಾರೆ ಎರೆಯುತ್ತಿದೆ. ಮಹಿಳೆಯರಿಗೆ ಇತರ ಪಕ್ಷಗಳಿಗಿಂತ ಹೆಚ್ಚು ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ. ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯರು ದೇಶದಲ್ಲಿ ಬದಲಾವಣೆ ತರಲು ಹಾಗೂ ದೇಶದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಂಘಟಿತರಾಗಬೇಕಾಗಿದೆ.
- ಭವ್ಯಾ ನರಸಿಂಹಮೂರ್ತಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ