ಕೃಷಿ ಬೆಳೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ, ಆ.34: ದೇಶದಲ್ಲಿ 60ರಿಂದ 70 ಶೇಕಡಾ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು ಕೃಷಿ ಬೆಳೆದಾಗ ಮಾತ್ರ ದೇಶ ಬೆಳೆಯಲು ಸಾಧ್ಯ. ರೈತರ ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಂಟ್ವಾಳ ಬಿಜೆಪಿ ರೈತ ಮೋರ್ಚಾದಿಂದ ವಿಶೇಷ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಕೃಷಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಲಾಭವಾಗಲಿದೆ. ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ. ಆದಾಯವೂ ಹೆಚ್ಚಲಿದೆ. ಆದರೆ ಈ ಕಾಯ್ದೆಯಿಂದ ರೈತರನ್ನು ಮೋಸ ಮಾಡುತ್ತಿರುವ ಮಂಡಿಗಳು, ದಲ್ಲಾಳಿಗಳು, ಕಮಿಷನ್ ಕೋರರಿಗೆ ನಷ್ಟವಾಗುತ್ತದೆ. ಇದಕ್ಕಾಗಿ ಈ ದುಷ್ಟ ಶಕ್ತಿಗಳು ರೈತರನ್ನು ಮುಂದೆ ಹಾಕಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿದೆ ಎಂದರು.
ಕೃಷಿ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ಯಾಂತ್ರಿಕೃತ ಕೃಷಿಗೆ ಪ್ರೋತ್ಸಾಹ ನೀಡಲಾಗಿದೆ. ರೈತ ತಾನು ಬೆಳೆದ ಕೃಷಿ ಉತ್ಪನ್ನಗಳನ್ನು ತನಗೆ ಬೇಕಾದವರಿಗೆ ಮಾರಾಟ ಮಾಡಲು ಅವಕಾಶ ಇದೆ. ಹೊಸ ಕಾಯ್ದೆಯಿಂದ ರೈತರ ಭೂಮಿಗೆ ಯಾವುದೇ ಸಮಸ್ಯೆ ಬರುದಿಲ್ಲ. ಕಾಯ್ದೆಯನ್ನು ವಿರೋಧ ಮಾಡುವವರಿಗೆ ನಾವು ಯಾಕೆ ಹೋರಾಟ ಮಾಡುತ್ತಿದ್ದೇವೆ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.
ಮೋದಿ ಸರಕಾರ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಕ್ರಾಂತಿಕಾರಿ ಬದಲಾವಣೆಯಿಂದ ಕೃಷಿ ಕ್ಷೇತ್ರವನ್ನು ಬಿಟ್ಟು ನಗರದ ಕಡೆ ವಲಸೆ ಹೋದ ಕೃಷಿಕರು ಮತ್ತೆ ಹಳ್ಳಿಗೆ ಬಂದು ಕೃಷಿಯತ್ತ ಮುಖ ಮಾಡಿದ್ದಾರೆ. ಅತಿವೃಷ್ಟಿ, ಅನಾವೃಷ್ಠಿಯಿಂದ ಕೃಷಿ ಹಾನಿಯಾದರೆ ಸೂಕ್ತ ಪರಿಹಾರ ನೀಡಿದ ಹೆಮ್ಮೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದ್ದಾಗಿದೆ ಎಂದರು.
ಕೃಷಿಕರು ಹೆಚ್ಚಿರುವ ಈ ದೇಶದಲ್ಲಿ ಪಕ್ಷ ಬಲವರ್ಧನೆಯಲ್ಲಿ ರೈತರ ಪಾತ್ರ ದೊಡ್ಡದು. ರೈತರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ರೈತರ ಮನೆಗಳಲ್ಲೇ ಮೋರ್ಚಾದ ಸಭೆಗಳನ್ನು ಸಂಘಟಿಸುವ ಕೆಲಸ ಮಾಡಬೇಕಿದೆ. ನಾವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಪ್ರಧಾನಿಗಳ ಬಲಿಷ್ಠ ಭಾರತ ನಿರ್ಮಾಣದ ಕನಸು ನನಸಾಗುತ್ತದೆ ಎಂದರು.
ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉಪಾಧ್ಯಕ್ಷ ಚಿದಾನಂದ, ಪಕ್ಷದ ಮುಂದಾಳು ಮಾಧವ ಮಾವೆ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಜಲು, ಬಂಟ್ವಾಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಸಜೀಪ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ರೈತ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಸ್ವಾಗತಿಸಿದರು. ಪ್ರಣಾಮ್ ಅಜ್ಜಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.