ಅಶ್ಲೀಲ ವೀಡಿಯೊ ಪ್ರಕರಣ: ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವನ್ ರಾಜೀನಾಮೆ
ಚೆನ್ನೈ: ಅಶ್ಲೀಲ ಸಂಭಾಷಣೆ ನಡೆಸಿದ ವೀಡಿಯೊ ಯೂ ಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆದ ಬಳಿಕ ಬಿಜೆಪಿ ಪಕ್ಷದ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ವರ್ಷ ಬಿಜೆಪಿ ಸೇರಿರುವ ಹಾಗೂ ಯೂ ಟ್ಯೂಬ್ ಚಾನೆಲ್ ನಡೆಸುತ್ತಿರುವ ಮದನ್ ರವಿಚಂದ್ರನ್ ಅವರು ಮಂಗಳವಾರ ಬೆಳಗ್ಗೆ ವೀಡಿಯೊವನ್ನು ರೆಕಾರ್ಡ್ ಮಾಡಿ ಯೂ ಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ತಮಿಳುನಾಡಿನ ಕನಿಷ್ಠ 15 ಬಿಜೆಪಿ ನಾಯಕರುಗಳ ವಿರುದ್ಧ ಇಂತಹ ವೀಡಿಯೊ ಸಾಕ್ಷ್ಯಗಳು ತನ್ನ ಬಳಿ ಇವೆ ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ. ರಾಘವನ್ ವೀಡಿಯೊದೊಂದಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ತಾನು ಸಂಪರ್ಕಿಸಿದ್ದು, ಮಹಿಳೆಯರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ವೀಡಿಯೊವನ್ನು ಬಿಡುಗಡೆ ಮಾಡುವಂತೆ ಅಣ್ಣಾಮಲೈ ನನಗೆ ಹೇಳಿದ್ದರು ಎಂದು ರವಿಚಂದ್ರನ್ ಹೇಳಿದ್ದಾರೆ.
ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಪಕ್ಷದ ಹುದ್ದೆಗೆ ರಾಜೀನಾಮೆ ಪ್ರಕಟಿಸಿರುವ ರಾಘವನ್, "ಕಳೆದ 30 ವರ್ಷಗಳಿಂದ ನಾನು ಯಾವುದೇ ಪ್ರಯೋಜನಗಳನ್ನು ಪಡೆಯದೇ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಇಂದು ಬೆಳಿಗ್ಗೆ ನನ್ನ ಬಗ್ಗೆ ಒಂದು ವೀಡಿಯೊ ಇರುವುದು ನನಗೆ ತಿಳಿಯಿತು. ನನ್ನನ್ನು ಹಾಗೂ ಪಕ್ಷವನ್ನು ನಿಂದಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ"ಎಂದು ಹೇಳಿದ್ದಾರೆ.
"ವೀಡಿಯೊ ಬಿಡುಗಡೆಯಾದ ನಂತರ ಅಣ್ಣಾಮಲೈ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಆರೋಪಗಳನ್ನು ನಿರಾಕರಿಸುತ್ತೇನೆ. ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇನೆ. ಸತ್ಯಕ್ಕೆ ಜಯ ಸಿಗುತ್ತದೆ"ಎಂದು ರಾಘವನ್ ಹೇಳಿದರು. ಅಣ್ಣಾಮಲೈ ಪ್ರತಿಕ್ರಿಯೆಗೆ ತಕ್ಷಣವೇ ಲಭ್ಯವಾಗಿಲ್ಲ.
ರಾಘವನ್ ಅವರು ತಮ್ಮದೇ ಪಕ್ಷದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಸಂಭಾಷಣೆ ಯೂ ಟ್ಯೂಬ್ ನಲ್ಲೂ ವೈರಲ್ ಆಗಿದೆ.