×
Ad

ಪುತ್ತೂರಿನಲ್ಲಿ ಶಾಲೆ ಆರಂಭದ ಬಗ್ಗೆ ಚರ್ಚೆ: ಶಾಸಕ ಸಂಜೀವ ಮಠಂದೂರು

Update: 2021-08-24 22:58 IST

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರದಲ್ಲಿ ಪುತ್ತೂರು ತಾಲೂಕಿನಲ್ಲಿ ಅತಿ ಕಡಿಮೆಯಿದ್ದು ಶೇ.1.94 ಪಾಸಿಟಿವಿಟಿ ದರವಿದೆ. ಈ ನಿಟ್ಟನಲ್ಲಿ ಮುಂಬರುವ ದಿನಗಳಲ್ಲಿ ಶಾಲೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಮಂಗಳವಾರ ತಾಲೂಕು ಆರೋಗ್ಯ ಇಲಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ದ.ಕ.ಜಿಲ್ಲಾ ಕೋವಿಡ್ ನಿರ್ವಹಣಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಪುತ್ತೂರು ತಾಲೂಕಿನಲ್ಲಿ ಅತೀ ಕಡಿಮೆ ಕೋವಿಡ್ ಪಾಸಿಟಿವಿಟಿ ರೇಟ್ ಕುರಿತು ಉಲ್ಲೇಖಿಸಿದ್ದಾರೆ. ಶೇ.2  ಪಾಸಿಟಿವಿಟಿ ರೇಟ್‍ನಿಂದ ಕೆಳಗೆ ಬಂದರೆ ಅಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯ ಸರಕಾರ ತಿಳಿಸಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.

ಸರಕಾರಿ ಆಸ್ಪತ್ರೆ ಕೇವಲ ಬಿಪಿಎಲ್, ಆಯುಷ್ಮಾನ್ ಕಾರ್ಡು ಹೊಂದಿದವರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ನಾಗರಿಕರು ಬಂದು ಇಲ್ಲಿ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಅವಕಾಶವಿದೆ. ಆದರೆ ಕೆಲವರು ಇಲ್ಲಿ ಉತ್ತಮ ಸೇವೆ ಮಾಡುತ್ತಿರುವ ವೈದ್ಯರು, ಆರೋಗ್ಯಾಧಿಕಾರಿಗಳ, ಸಿಬ್ಬಂದಿಗಳ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುವುದು ಗಮನಕ್ಕೆ ಬಂದಿದೆ. ಆಸ್ಪತ್ರೆಯ ಒಳ್ಳೆಯ ವಿಚಾರವನ್ನು ಅಭಿನಂದಿಸುವುದು ಮತ್ತು ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅದನ್ನು ಶಾಸಕರ, ಸಹಾಯಕ ಆಯುಕ್ತರ, ತಹಶೀಲ್ದಾರ್‍ರ ಅಥವಾ ಆಸ್ಪತ್ರೆಯ ವೈದ್ಯಾಧಿಕಾರಿಗಳ, ಸಮಿತಿ ಸದಸ್ಯರ ಗಮನಕ್ಕೆ ತಂದು ಸರಿಪಡಿಸುವ ಪ್ರಯತ್ನಗಳನ್ನು ನಡೆಸಬೇಕು ಅದು ಬಿಟ್ಟು ಅವರ ಆತ್ಮಸ್ಥೈರ್ಯವನ್ನು ಕುಂದಿಸುವ ಕೆಲಸ ಮಾಡುವುದು ಖಂಡನೀಯ ಎಂದರು. 

ಸರಕಾರಿ ಆಸ್ಪತ್ರೆಯ ವಿದ್ಯುತ್ ಬಿಲ್ ಸುಮಾರು ರೂ. 7 ಲಕ್ಷ ಬಾಕಿ ಇರುವ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಅವರು ಶಾಸಕರ ಗಮನಕ್ಕೆ ತಂದರು. ಮೆಸ್ಕಾಂ ಇಂಜಿನಿಯರ್ ಶಿಲ್ಪಾ ಶೆಟ್ಟಿ ಅವರು ಸ್ಪಷ್ಟನೆ ನೀಡಿದರು. ಈಗಾಗಲೇ ಆಸ್ಪತ್ರೆಯಲ್ಲಿ ಸೋಲಾರ್ ಸಿಸ್ಟಮ್ ಇದ್ದರೂ ಅದರ ಕಿಲೋ ವ್ಯಾಟ್ ಕಡಿಮೆ ಇದೆ ಎಂದು ಮೆಸ್ಕಾಂ ಇಂಜಿನಿಯರ್ ಶಾಸಕರ ಗಮನಕ್ಕೆ ತಂದರು. ಶಾಸಕರು ಮಾತನಾಡಿ ಸರಕಾರಿ ಆಸ್ಪತ್ರೆಗೆ ಸೋಲಾರ್ ಗ್ರಿಡ್ ಪವರ್ ಅಳವಡಿಸುವ ಕುರಿತು ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು. 

ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರೋಗ್ಯ ರಕ್ಷಾ ಸಮಿತಿ ಸzಸ್ಯರಾದ ಡಾ. ಕೃಷ್ಣಪ್ರಸನ್ನ, ವಿದ್ಯಾ ಗೌರಿ, ರಫೀಕ್ ದರ್ಬೆ, ರಾಜೇಶ್ ಬನ್ನೂರು, ಕೃಷ್ಣ ನಾಯ್ಕ್ ಮತ್ತು ವೈದ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News