×
Ad

ಬಿಆರ್‌ಶೆಟ್ಟಿ ಆಸ್ಪತ್ರೆಯ 16 ಸಿಬ್ಬಂದಿಗಳ ವಜಾ: ಸಿಬ್ಬಂದಿಗಳಿಂದ ಮತ್ತೆ ಮಿಂಚಿನ ಮುಷ್ಕರ

Update: 2021-08-24 23:37 IST
ಫೈಲ್ ಚಿತ್ರ

ಉಡುಪಿ, ಆ.24: ಬಿ.ಆರ್.ಶೆಟ್ಟಿ ಗ್ರೂಫ್ ನಡೆಸುತ್ತಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಮಂಡಳಿ, ಬಾಕಿ ಸಂಬಳದ ಪಾವತಿಗಾಗಿ ಪ್ರತಿಭಟನೆ ನಡೆಸಿದ ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಮುಂಚೂಣಿಯಲ್ಲಿದ್ದ 16 ಮಂದಿ ನೌಕರರನ್ನು ಹಠಾತ್ತನೆ ಕೆಲಸದಿಂದ ಕಿತ್ತು ಹಾಕಿದ್ದು, ಇದರಿಂದ ಸಿಬ್ಬಂದಿಗಳು ರಾತ್ರಿಯಿಂದ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಡಳಿತ ಮಂಡಳಿಯಿಂದ ಬಾಕಿ ಇರುವ ಮೂರು ತಿಂಗಳ ಸಂಬಳಕ್ಕಾಗಿ ಸಿಬ್ಬಂದಿಗಳು ಎರಡು ದಿನಗಳ ಹಿಂದೆ ಮುಷ್ಕರ ನಡೆಸಿದ್ದು, ಸರಕಾರ ಆಸ್ಪತ್ರೆಗೆ ನೀಡಿದ 50 ಲಕ್ಷ ರೂ. ಮೊತ್ತದಲ್ಲಿ ವೈದ್ಯರನ್ನು ಹೊರತು ಪಡಿಸಿ ಉಳಿದೆಲ್ಲಾ ಪ್ಯಾರಾಮೆಡಿಕಲ್ ಹಾಗೂ ಇತರ ಸಿಬ್ಬಂದಿಗಳ ಜೂನ್‌ವರೆಗೆಗಿನ ಸಂಬಳವನ್ನು ನೀಡಲಾಗಿತ್ತು. ಆದರೆ ಮಂಗಳವಾರ ಯಾವುದೇ ಪೂರ್ವ ಸೂಚನೆಯನ್ನೂ ನೀಡದೇ ಆಡಳಿತ ಮಂಡಳಿ ಮುಷ್ಕರ ಮುಂಚೂಣಿಯಲ್ಲಿದ್ದ 16 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿತ್ತು. ಆಡಳಿತ ಮಂಡಳಿಯ ಈ ವರ್ತನೆಯನ್ನು ಖಂಡಿಸಿ ಉಳಿದ ಸಿಬ್ಬಂದಿಗಳು ಕೆಲಸ ಬಿಟ್ಟು ಮತ್ತೆ ಆಸ್ಪತ್ರೆ ಮುಂದೆ ಧರಣಿ ನಡೆಸುತಿದ್ದಾರೆ. ತಡ ರಾತ್ರಿ ಈ ವರದಿ ಬರೆಯುತ್ತಿರುವಾಗಲೂ ಸಿಬ್ಬಂದಿಗಳ ಮುಷ್ಕರ ನಡೆಯುತ್ತಿದೆ.

ಮಾತುಕತೆಗೆ ಬಂದ ಆಸ್ಪತ್ರೆಯ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ವಾಗ್ವಾದಕ್ಕಿಳಿದ ಸಿಬ್ಬಂದಿಗಳು ವಜಾಕ್ಕೆ ಕಾರಣ ನೀಡುವಂತೆ ಆಗ್ರಹಿಸಿದರು.

ಈ ವೇಳೆ ಉಡುಪಿ ನಗರ ಪೊಲೀಸರು ಮದ್ಯಪ್ರವೇಶಿಸಿದರು. ಇದೀಗ ಆಸ್ಪತ್ರೆಯ ಸಿಬ್ಬಂದಿಗಳನ್ನು ಶಾಸಕ ಕೆ.ರಘುಪತಿ ಭಟ್ ನಾಳೆ ಮಾತುಕತೆಗೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News