×
Ad

ಶ್ರೀಕೃಷ್ಣ ಜನ್ಮಾಷ್ಟಮಿ, ಚೌತಿ ಹಬ್ಬಕ್ಕಾಗಿ ಕೋವಿಡ್ ನಿರ್ಬಂಧ ಸಡಿಲಿಸಿದ ಗುಜರಾತ್

Update: 2021-08-25 09:56 IST
ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ (Photo source: PTI)

ಹೊಸದಿಲ್ಲಿ, ಆ.25: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಚೌತಿ ಹಬ್ಬಗಳ ಹಿನ್ನೆಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಗುಜರಾತ್ ಸರ್ಕಾರ ಸಡಿಲಿಸಿದೆ.

ನಿರ್ಬಂಧಗಳ ಸಡಿಲಿಕೆ ನಿರ್ಧಾರದ ಅನ್ವಯ ಈಗ ರಾಜ್ಯದ ಎಂಟು ನಗರಗಳಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಸಮಯವನ್ನು ಸಡಿಲಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ರುಪಾನಿ ನೇತೃತ್ವದ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಕುರಿತ ರಾಜ್ಯಮಟ್ಟದ ಕೋರ್ ಕಮಿಟಿ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾತ್ರಿ 11ರಿಂದ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ಆಗಸ್ಟ್ 30ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅನುಕೂಲವಾಗುವಂತೆ ಮಧ್ಯರಾತ್ರಿ 1 ಗಂಟೆಗೆ ಮರುನಿಗದಿಪಡಿಸಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ. ಸಾಂಪ್ರದಾಯಿಕ ಕೃಷ್ಣಾಷ್ಟಮಿ ಮೆರವಣಿಗೆಯನ್ನು ಸೀಮಿತ ಸದಸ್ಯರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಮೊಸರು ಕುಡಿಕೆ ಮತ್ತು ಸ್ಥಳೀಯ ಪ್ರದರ್ಶನಗಳಿಗೆ ಅವಕಾಶವಿಲ್ಲ ಎಂದು ಸರ್ಕಾರಿ ಪ್ರಕಟನೆ ಹೇಳಿದೆ.

ಅಂತೆಯೇ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಅಹ್ಮದಾಬಾದ್, ವಡೋದರ, ರಾಜಕೋಟ್, ಸೂರತ್, ಭಾವಾನಗರ, ಜಾಮ್‌ನಗರ, ಗಾಂಧಿನಗರ ಮತ್ತು ಜುನಾಗಢದಲ್ಲಿ ಸೆಪ್ಟೆಂಬರ್ 9ರಿಂದ 19ರವರೆಗೆ ರಾತ್ರಿ ಕರ್ಫ್ಯೂ ಆರಂಭದ ಅವಧಿಯನ್ನು ಮಧ್ಯರಾತ್ರಿ 12 ಗಂಟೆಗೆ ವಿಸ್ತರಿಸಲಾಗಿದೆ.

ಸಾರ್ವಜನಿಕ ಪೆಂಡಾಲ್‌ಗಳಲ್ಲಿ ನಾಲ್ಕು ಅಡಿಯ ಗಣೇಶ ಮೂರ್ತಿ ಮತ್ತು ಮನೆಗಳಲ್ಲಿ 2 ಅಡಿಯ ಮೂರ್ತಿ ಇಟ್ಟು ಪೂಜೆ ನಡೆಸಲು ಅವಕಾಶ ನೀಡಲಾಗಿದೆ. ಉಭಯ ಹಬ್ಬಗಳ ಆಚರಣೆಯಲ್ಲಿ ಸುರಕ್ಷಿತ ಅಂತರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಜನತೆಗೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News