ಕಾರ್ಯಕರ್ತೆಯೊಂದಿಗೆ ಅಶ್ಲೀಲ ವೀಡಿಯೊ ಕಾಲ್‌ ಕ್ಲಿಪ್‌ ವೈರಲ್: ರಾಜೀನಾಮೆ ನೀಡಿದ ತಮಿಳುನಾಡು ಬಿಜೆಪಿ ಪ್ರ.ಕಾರ್ಯದರ್ಶಿ

Update: 2021-08-25 06:31 GMT
Twitter Photo/@KTRaghavanBJP

ಚೆನ್ನೈ: ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಟಿ ರಾಘವನ್‌ ಕಾಣಿಸಿಕೊಂಡಿದ್ದಾರೆ ಎನ್ನಲಾದ ಅಶ್ಲೀಲ ವೀಡಿಯೊ ಕಾಲ್‌ ಕ್ಲಿಪ್‌ ಒಂದನ್ನು ತಮ್ಮ ಸಹ ಕಾರ್ಯಕರ್ತನೇ ಯೂಟ್ಯೂಬ್‌ ನಲ್ಲಿ ಬಿಡುಗಡೆಗೊಳಿಸಿದ್ದು, ತಮ್ಮ ಸ್ಥಾನಕ್ಕೆ ರಾಘವನ್‌ ರಾಜೀನಾಮೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಪಕ್ಷದ ಕಾರ್ಯಕರ್ತೆಯೊಂದಿಗಿನ ಈ ವೀಡಿಯೊ ಕ್ಲಿಪ್‌ ಅನ್ನು ಬಿಜೆಪಿ ಕಾರ್ಯಕರ್ತ ಮದನ್‌ ರವಿಚಂದ್ರನ್‌ ಎಂಬವರು ಯೂಟ್ಯೂಬ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.  ಆರೋಪವನ್ನು ನಿರಾಕರಿಸಿ ಟ್ವೀಟ್‌ ಮಾಡಿದ ರಾಘವನ್‌, ಈ ಕುರಿತು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

"ತಮಿಳುನಾಡಿನ ಜನರು, ಪಕ್ಷದ ಕಾರ್ಯಕರ್ತರು ಮತ್ತು ನನ್ನ ಜೊತೆಗಿರುವವರಿಗೆ ನಾನು ಯಾರೆಂದು ತಿಳಿದಿದೆ. ನಾನು 30 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದೇನೆ" ಎಂದು ಅವರು ಹೇಳಿದರು. "ಇಂದು ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊ ಕುರಿತು ನನಗೆ ತಿಳಿದು ಬಂತು. ಇದು ನನಗೆ ಮತ್ತು ಪಕ್ಷಕ್ಕೆ ಕಳಂಕ ತರುವ ಸಲುವಾಗಿ ಬಿಡುಗಡೆ ಮಾಡಲಾಗಿದೆ. ನಾನು ರಾಜ್ಯಾಧ್ಯಕ್ಷ ಅಣ್ಣಾಮಲೈಯವರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿನ ನನ್ನ ಹುದ್ದೆಗೆ ನಾನು ರಾಜೀನಾಮೆ ನೀಡುತ್ತೇನೆ. ಈ ಆರೋಪಗಳನ್ನು ನಿರಾಕರಿಸುತ್ತಿದ್ದೇನೆ. ನ್ಯಾಯವು ಮೇಲುಗೈ ಸಾಧಿಸಲಿದೆ" ಎಂದು ಅವರು ಹೇಳಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್ ಮದನ್ ಡೈರಿಯಲ್ಲಿ ವಿಡಿಯೋವನ್ನು ಬಿಡುಗಡೆ ಮಾಡಿದ ರವಿಚಂದ್ರನ್, ತಮ್ಮ ತಂಡದಲ್ಲಿ ಆ ರೀತಿಯ 15 ನಾಯಕರ ಆಡಿಯೋ ಕ್ಲಿಪ್‌ಗಳು ಮತ್ತು ವಿಡಿಯೋ ತುಣುಕುಗಳಿವೆ ಮತ್ತು ಅವುಗಳನ್ನು ಕಾಲಕ್ರಮೇಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಮುಖಂಡರಿಂದ ಲೈಂಗಿಕ ಶೋಷಣೆ ನಡೆಯುತ್ತಿದೆ ಎಂಬ ಆರೋಪಗಳ ಕಾರಣದಿಂದ ನಮಗೆ ಇಂತಹ ಕಲ್ಪನೆ ಬಂತು. ಅಂತಹ ವ್ಯಕ್ತಿಗಳಿಂದ ಪಕ್ಷವನ್ನು ಸ್ವಚ್ಛಗೊಳಿಸುವುದೇ ನಮ್ಮ ಗುರಿ ಎಂದು ರವಿಚಂದ್ರನ್‌ ಹೇಳಿದ್ದಾರೆ.

ರವಿಚಂದ್ರನ್‌ ರವರ ಉದ್ದೇಶವನ್ನು ಪ್ರಶ್ನಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, "ಇದು ಸ್ವೀಕಾರಾರ್ಹವಲ್ಲ. ನಾವು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ನಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿ ಮಲರ್ಕೊಡಿ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗುವುದು.  ಆರೋಪಿಯಾಗಿ ಸಾಬೀತಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News