"ಹಿಂದೂಗಳ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ": ಇಂದೋರ್‌ ನಲ್ಲಿ ಹಿಂದುತ್ವ ಸಂಘಟನೆಗಳ ಪ್ರತಿಭಟನೆ

Update: 2021-08-25 06:56 GMT
Photo: english.newstracklive.com

ಭೋಪಾಲ್: ಹಿಂದುತ್ವ ಸಂಘಟನೆ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ 25 ವರ್ಷದ ಬಳೆ ಮಾರಾಟಗಾರನ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಪೊಲೀಸರು ಪೋಕ್ಸೋ ಕಾಯಿದೆ ಹೇರಿದ ಬೆನ್ನಿಗೇ ಇಂದೋರ್ ನಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಗಳು,  ಹಿಂದುಗಳ ವಿರುದ್ಧದ, ಪ್ರಮುಖವಾಗಿ ಯುವತಿಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗಿವೆ ಎಂದು ಆರೋಪಿಸಿವೆ.

ನಿಷೇಧಾಜ್ಞೆಯ ಹೊರತಾಗಿಯೂ ಸಂಘಟನೆಗಳ ಕಾರ್ಯಕರ್ತರ ಒಂದು ಗುಂಪು ನಗರದ ರೀಗಲ್ ಕ್ರಾಸಿಂಗ್ ಸಮೀಪ ಪ್ರತಿಭಟನೆ ನಡೆಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಭಟನಾಕಾರರು ಡಿಐಜಿ-ಇಂದೋರ್ ಅವರಿಗೆ ಮನವಿ ಸಲ್ಲಿಸಿದ್ದು ಇಂದೋರ್‍ನಲ್ಲಿ ಹಿಂದುಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಅದರಲ್ಲಿ ದೂರಲಾಗಿದೆಯಲ್ಲದೆ ಅಪರಾಧಗಳ ಹಿಂದೆ ಎಸ್‍ಡಿಪಿಐ, ಪಿಎಫ್‍ಐ ನಂಟಿನ ಕುರಿತೂ ಆರೋಪಿಸಲಾಗಿದೆ ಎಂದು newindianexpress.com ವರದಿ ಮಾಡಿದೆ.

ಬಳೆ ಮಾರಾಟ ಮಾಡುತ್ತಿದ್ದ ತಸ್ಲೀಮ್ ಎಂಬಾತನ ಮೇಲೆ ಕಳೆದ ರವಿವಾರ ನಡೆದ ಹಲ್ಲೆ ಘಟನೆಯನ್ನು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಖಂಡಿಸಿದ್ದಾರಲ್ಲದೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಹೇಳಿಕೆ ಆರೋಪಿಗಳನ್ನು ರಕ್ಷಿಸುವಂತಿದೆ ಎಂದಿದ್ದರು.

"ಮಧ್ಯಪ್ರದೇಶದಲ್ಲಿ ಕಾನೂನನ್ನು ಎತ್ತಿ ಹಿಡಿಯಲಾಗುತ್ತಿದೆ. ಎರಡು ಮೂರು ಗುರುಪತ್ರಗಳನ್ನು ಹೊಂದಿಕೊಂಡು ನಿಜವಾದ ಗುರುತನ್ನು ಮರೆಮಾಚುವ ಯಾರೇ ಆದರೂ ಅಪರಾಧಿ" ಎಂದು ಮಿಶ್ರಾ ಈಗಾಗಲೇ ಹೇಳಿದ್ದಾರಲ್ಲದೆ ಮಧ್ಯಪ್ರದೇಶದ ವಿಚಾರದಲ್ಲಿ ಹಸ್ತಕ್ಷೇಪ ನಡೆಸದಂತೆ ಉವೈಸಿಗೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News