ಜಂತರ್ ಮಂತರ್ ನಲ್ಲಿ ದ್ವೇಷ ಘೋಷಣೆ ಪ್ರಕರಣ: ಇನ್ನೋರ್ವ ಆರೋಪಿಯ ಬಂಧನ
ಹೊಸದಿಲ್ಲಿ: ಆಗಸ್ಟ್ 8 ರಂದು ಜಂತರ್ ಮಂತರ್ ಬಳಿ ಪ್ರಚೋದನಕಾರಿ, ದ್ವೇಷ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬುಧವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂದಿತ ವ್ಯಕ್ತಿಯನ್ನು ಉತ್ತಮ ಉಪಾಧ್ಯಾಯ ಎಂದು ಗುರುತಿಸಲಾಗಿದ್ದು, ಈತ ಗಾಜಿಯಾಬಾದ್ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಆಗಸ್ಟ್ 8ರಂದು ಜಂತರ್ ಮಂತರ್ ನಲ್ಲಿ ಹಾಜರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರದಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸೇನೆಯ ಮುಖ್ಯಸ್ಥ ಉತ್ತರಪ್ರದೇಶದ ಲಕ್ನೋ ನಿವಾಸಿ ಸುಶೀಲ್ ತಿವಾರಿ ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟವರ ಸಂಖ್ಯೆ ಇದೀಗ 8ಕ್ಕೇರಿದೆ.
ದ್ವೇಷ ಘೋಷಣೆಗೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯವು ಮೂವರು ಆರೋಪಿಗಳ ಝಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆಗಸ್ಟ್ 13ರಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಉದ್ಭವ್ ಕುಮಾರ್ ಜೈನ್ ಎಲ್ಲಾ ಮೂವರು ಆರೋಪಿಗಳಾದ ಪ್ರೀತ್ ಸಿಂಗ್, ದೀಪಕ್ ಸಿಂಗ್ ಮತ್ತು ವಿನೋದ್ ಶರ್ಮಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು.