ಕಾಂಗ್ರೆಸಿಗರ 'ರಿಮೂವ್‌ ಕ್ಯಾಪ್ಟನ್‌ʼ ಮನವಿಯ ನಡುವೆಯೂ ಚುನಾವಣೆ ಮುನ್ನಡೆಸಲಿರುವ ಅಮರಿಂದರ್‌ ಸಿಂಗ್‌

Update: 2021-08-25 10:18 GMT

ಹೊಸದಿಲ್ಲಿ: ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ನಾಯಕತ್ವದ ವಿರುದ್ಧ ಕಾಂಗ್ರೆಸ್‌ ಪಕ್ಷದ ನಾಯಕರ ವರ್ಗವೊಂದು ಬಂಡಾಯೆದ್ದ ಬಳಿಕ ಕಾಂಗ್ರೆಸ್‌ ಪಕ್ಷವು ಇದೀಗ ಅಮರಿಂದರ್‌ ಸಿಂಗ್‌ ರನ್ನು ಬೆಂಬಲಿಸಿದೆ. ಪಕ್ಷದ ಹಿರಿಯ ನಾಯಕ ಹರೀಶ್ ರಾವತ್, ಮುಂಬರುವ ರಾಜ್ಯ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

"ನಾವು 2022 ಪಂಜಾಬ್ ಚುನಾವಣೆಗಳಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಸ್ಪರ್ಧಿಸಲಿದ್ದೇವೆ" ಎಂದು ರಾಜ್ಯದ ಪಕ್ಷದ ಉಸ್ತುವಾರಿಯಾಗಿರುವ ರಾವತ್ ಹೇಳಿದರು.

ನಿನ್ನೆ, ನಾಲ್ವರು ಸಚಿವರು ಸೇರಿದಂತೆ 23 ಶಾಸಕರು ಸಭೆ ನಡೆಸಿದರು ಮತ್ತು ಈ ವಿಚಾರದ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದರು. "ಕ್ಯಾಪ್ಟನ್ ರನ್ನು ಬದಲಿಸಬೇಕು ಇಲ್ಲದಿದ್ದರೆ ಕಾಂಗ್ರೆಸ್ ಉಳಿಯುವುದಿಲ್ಲ ... ನಾವು ಸೋನಿಯಾ ಗಾಂಧಿಯನ್ನು ಭೇಟಿ ಮಾಡುತ್ತೇವೆ" ಎಂದು ಸಭೆಯ ನಂತರ ಕ್ಯಾಬಿನೆಟ್ ಸಚಿವ ತ್ರಿಪ್ತ್ ರಾಜಿಂದರ್ ಸಿಂಗ್ ಬಜ್ವಾ ಹೇಳಿದ್ದರು.

ಇಂದು, ನಾಲ್ಕು ಕ್ಯಾಬಿನೆಟ್ ಮಂತ್ರಿಗಳಾದ ಬಜ್ವಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ, ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಚರಣಜಿತ್ ಸಿಂಗ್ ಚನ್ನಿ ಡೆಹ್ರಾಡೂನ್ ನಲ್ಲಿ ರಾವತ್ ರನ್ನು ಭೇಟಿಯಾದರು. ರಾವತ್ ರ ಭೇಟಿಯ ನಂತರ, ಅವರು ಸೋನಿಯಾ ಗಾಂಧಿಯನ್ನು ಭೇಟಿ ಮಾಡಲು ದಿಲ್ಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News