×
Ad

ಸಂಬಳ ಕೇಳಿದಕ್ಕೆ ಕೆಲಸದಿಂದ 16 ಮಂದಿಯ ವಜಾ ಆರೋಪ: ಉಡುಪಿ ತಾಯಿ -ಮಕ್ಕಳ ಆಸ್ಪತ್ರೆ ಸಿಬ್ಬಂದಿಯಿಂದ ಅಹೋರಾತ್ರಿ ಮುಷ್ಕರ

Update: 2021-08-25 17:14 IST

ಉಡುಪಿ, ಆ. 25: ಬಾಕಿ ಸಂಬಳ ಪಾವತಿಗಾಗಿ ಹೋರಾಟ ನಡೆಸುತ್ತಿರುವ ಪ್ರಮುಖ 16 ಮಂದಿ ನೌಕರರನ್ನು ಆಡಳಿತ ಮಂಡಳಿ ವಜಾಗೊಳಿಸಿರುವುದಾಗಿ ಆರೋಪಿಸಿ ಬಿ.ಆರ್.ಶೆಟ್ಟಿ ಗ್ರೂಪ್ ಮುನ್ನಡೆಸುತ್ತಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಕಳೆದ ರಾತ್ರಿಯಿಂದ ನಡೆಸುತ್ತಿರುವ ಅಹೋರಾತ್ರಿ ಮುಷ್ಕರ ಇಂದು ಕೂಡ ಮುಂದುವರೆದಿದೆ.

ಆಡಳಿತ ಮಂಡಳಿಯಿಂದ ಬಾಕಿ ಇರುವ ಮೇ, ಜೂನ್ ಹಾಗೂ ಜುಲೈ ತಿಂಗಳ ಸಂಬಳಕ್ಕಾಗಿ ಕೆಲವು ದಿನಗಳ ಹಿಂದೆ ಆಸ್ಪತ್ರೆಯ ಐವರು ಡ್ಯುಟಿ ಡಾಕ್ಟರ್ ಸೇರಿದಂತೆ ಎಲ್ಲ 180 ಸಿಬ್ಬಂದಿ ಮುಷ್ಕರ ನಡೆಸಿದ್ದರು. ಸರಕಾರ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ಬಿಡುಗಡೆ ಮಾಡಿರುವ 50ಲಕ್ಷ ರೂ. ಹಣ ದಲ್ಲಿ ಸಿಬ್ಬಂದಿಗಳ ಸಂಬಳ ನೀಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ ಆಡಳಿತ ಮಂಡಳಿ ಈ ಹಣದಲ್ಲಿ ಮೇ ತಿಂಗಳ ಕೇವಲ ಶೇ.60ರಷ್ಟು ಸಂಬಳ ಮಾತ್ರ ಪಾವತಿಸಿದ್ದರು ಎಂದು ದೂರಲಾಗಿತ್ತು.

ಇದನ್ನು ವಿರೋಧಿಸಿ ಸಿಬ್ಬಂದಿಗಳು ಮತ್ತೆ ಮುಷ್ಕರ ನಡೆಸಿದರು. ಬಳಿಕ ಶಾಸಕ ರಘುಪತಿ ಭಟ್ ಮಾತುಕತೆಯಂತೆ ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ ಸರಕಾರ ಬಿಡುಗಡೆ ಮಾಡಿರುವ ಪೂರ್ಣ ಹಣವನ್ನು ಸಂಬಳಕ್ಕೆ ಪಾವತಿಸುವುದಾಗಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು. ಆದರೆ ಮಂಗಳವಾರ ಸಂಜೆ ಆಡಳಿತ ಮಂಡಳಿ ಯಾವುದೇ ನೋಟೀಸ್ ಜಾರಿ ಮಾಡದೆ ಏಕಾಏಕಿಯಾಗಿ ಡ್ಯುಟಿ ಡಾಕ್ಟರ್-2, ರಿಸೆಪಿನಿಸ್ಟ್-2, ನಿರ್ವಹಣೆ ವಿಭಾಗ-3, ಲ್ಯಾಬೊರೇಟರಿ-2, ಹೌಸ್ ಕೀಪಿಂಗ್-2, ಟ್ರಾನ್ಸ್‌ಪೋರ್ಟ್ ವಿಭಾಗ-1, ಸಿಎಸ್‌ಎಸ್‌ಡಿ-1, ಸೆಕ್ಯುರಿಟಿ-1, ನರ್ಸಿಂಗ್ ವಿಭಾಗದ ಇಬ್ಬರನ್ನು ವಜಾಗೊಳಿಸಿದೆ.

ಆಡಳಿತ ಮಂಡಳಿಯ ಈ ಕ್ರಮವನ್ನು ವಿರೋಧಿಸಿ ಎಲ್ಲ 180 ಸಿಬ್ಬಂದಿಗಳು ರಾತ್ರೋರಾತ್ರಿ ಮುಷ್ಕರ ಹೂಡಿದರು. ಇಂದು ಬೆಳಗ್ಗೆ ಕೂಡ ಮುಷ್ಕರ ಮುಂದುವರೆಸಿರುವ ಸಿಬ್ಬಂದಿಗಳು, ಆಸ್ಪತ್ರೆಯ ಮುಂದೆ ಧರಣಿ ನಡೆಸುತ್ತಿದ್ದಾರೆ.

ಕೂಡಲೇ ಬಾಕಿ ಇರುವ ಸಂಬಳ ಪಾವತಿ ಮಾಡಬೇಕು. ಈಗಿರುವ ಆಡಳಿತ ಮಂಡಳಿಯನ್ನು ಕೈಬಿಟ್ಟು ಸರಕಾರವೇ ಆಸ್ಪತ್ರೆಯನ್ನು ಮುನ್ನಡೆಸಬೇಕು. ಅಲ್ಲಿಯ ವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ. ಈ ಮುಷ್ಕರ ಇಂದು ರಾತ್ರಿ ಕೂಡ ಮುಂದು ವರೆಯಲಿದೆ ಎಂದು ಮುಷ್ಕರ ನಿರತ ಸಿಬ್ಬಂದಿಗಳು ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆಗೆ ದೂರು

ಯಾವುದೇ ನೋಟೀಸ್ ಜಾರಿ ಮಾಡದೆ ಏಕಾಏಕಿಯಾಗಿ ಕೆಲಸದಿಂದ ವಜಾಗೊಳಿಸಿರುವ ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ 16 ಮಂದಿ ನೌಕರರು ಉಡುಪಿ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಾರೆ.

‘ಆಸ್ಪತ್ರೆಯ ಆಡಳಿತ ಮಂಡಳಿಯವರು ನಮ್ಮನ್ನು ಏಕಾಏಕಿಯಾಗಿ ಯಾವುದೇ ನೋಟೀಸ್ ಜಾರಿ ಮಾಡದೆ ಕೆಲಸದಿಂದ ವಜಾಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದೇವೆ. ಆ ಸಂಬಂಧ ನಾಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಅಲ್ಲಿಯವರೆಗೆ ನಮ್ಮ ಅಹೋರಾತ್ರಿ ಮುಷ್ಕರ ಮುಂದುವರೆಸಲಾಗುವುದು’ ಎಂದು ವಜಾಗೊಂಡಿರುವ ಆಸ್ಪತ್ರೆಯ ನೌಕರ ಹರೀಶ್ ಕುಂದರ್ ತಿಳಿಸಿದ್ದಾರೆ.

''ಆಸ್ಪತ್ರೆಯ ಒಟ್ಟು 180 ಸಿಬ್ಬಂದಿಗಳಿದ್ದು, ನಾವೆಲ್ಲ ಶಿಫ್ಟ್ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇದರಿಂದ ರೋಗಿಗಳಿಗೆ ಯಾವುದೇ ತೊಂದರೆ ಆಗುತ್ತಿಲ್ಲ. ಹೊರ ರೋಗಿ ವಿಭಾಗ ಕೂಡ ಕಾರ್ಯನಿರ್ವಹಿಸುತ್ತಿವೆ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಲಾಗುವುದು. ಈ ಆಡಳಿತ ಮಂಡಳಿಯೇ ಮುಂದುವರೆದರೆ ನಾವು ಇಲ್ಲಿ ಕೆಲಸ ಮಾಡುವುದಿಲ್ಲ. 2019ರ ನವೆಂಬರ್ ತಿಂಗಳಲ್ಲಿ ಕಾರ್ಯಾರಂಭಗೊಂಡ ಈ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮೊದಲ ಒಂದು ವರ್ಷ ಮಾತ್ರ ಸರಿಯಾಗಿ ಸಂಬಳ ನೀಡಲಾಗಿದೆ. ಅದರ ನಂತರ ಪ್ರತಿ ತಿಂಗಳು ಸಂಬಳ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ''

-ಚೈತ್ರಾ, ಲ್ಯಾಬ್ ಉಸ್ತುವಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News